

ವಿಲಾಸ ಮೇಲಗಿರಿ
ಬೆಂಗಳೂರು: ಚುನಾವಣಾ ಅಕ್ರಮಗಳು ದಿನೇದಿನೆ ಮಿತಿ ಮೀರುತ್ತಿವೆ. ಲಂಚ, ಉಚಿತ ಉಡುಗೊರೆ, ಮದ್ಯ, ಮಾದಕ ವಸ್ತು ವಿತರಣೆ, ಚಿನ್ನ, ಬೆಳ್ಳಿ ಆಭರಣ ಹಂಚಿಕೆ... ಹೀಗೆ ಒಂದೇ ಎರಡೇ. ನಾಮಪತ್ರ ಸಲ್ಲಿಕೆಗೂ ಮುನ್ನವೇ ನಗದು ಸೇರಿ 140 ಕೋಟಿ ರೂ. ಮೌಲ್ಯದ ಉಡುಗೊರೆ ಮತ್ತು ಗೃಹ ಬಳಕೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 1,119 ಎಫ್ಐಆರ್ ದಾಖಲಿಸಲಾಗಿದೆ.
ಇನ್ನು ನಾಮಪತ್ರ ಸಲ್ಲಿಕೆ ಆರಂಭವಾದ ಬಳಿಕ ಲಂಚ ರುಷುವತ್ತುಗಳು ಮೇರೆ ಮೀರುವ ಸಾಧ್ಯತೆಗಳಿವೆ. ನೀತಿಸಂಹಿತೆ ಜಾರಿಗೆ ಬರುವ 3-4 ತಿಂಗಳ ಮುನ್ನವೇ ಅನೇಕ ಅಭ್ಯರ್ಥಿ ಆಕಾಂಕ್ಷಿಗಳು ಭರ್ಜರಿ ಉಡುಗೊರೆ ಹಂಚಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮಾ. 29ರ ಬಳಿಕ ವಿವಿಧ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿವೆ. ನಿತ್ಯ ಕೋಟಿ ಕೋಟಿ ರೂ. ನಗದು, ಉಡುಗೊರೆ ಪತ್ತೆಯಾಗುತ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ, ರಾಜ್ಯ ಪಕ್ಷಗಳ ಸ್ಥಾನಮಾನ ಬದಲಾಗಿದ್ದೇಕೆ?
ಈಗಾಗಲೇ ಸಿ-ವಿಜಿಲ್ ಆ್ಯಪ್ ಮೂಲಕ 2,389 ದೂರು ಸ್ವೀಕರಿಸಲಾಗಿದೆ. ಅವುಗಳಲ್ಲಿ ಪೋಸ್ಟರ್, ಬ್ಯಾನರ್ ಅಂಟಿಸಿದ 1,417 ಪ್ರಕರಣ, ಹಣ ಹಂಚಿಕೆ ಪ್ರಕರಣ-22, ಬಂದೂಕು ಪ್ರದರ್ಶಿಸಿ ಬೆದರಿಕೆ-261, ಉಡುಗೊರೆ& ಕೂಪನ್ ಹಂಚಿಕೆ-31, ಮದ್ಯ ಹಂಚಿಕೆ-18, ಆಸ್ತಿ ಹಾನಿಗೊಳಿಸುವಿಕೆ-27, ಪರವಾನಗಿ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ 30 ಪ್ರಕರಣ ದಾಖಲಾಗಿದ್ದು, ಈ ಪೈಕಿ 1,979 ದೂರುಗಳು ನಿಜವೆಂದು ಕಂಡುಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಸಿ-ವಿಜಿಲ್ ಆ್ಯಪ್ ಮೂಲಕ ನಿಮ್ಮ ಕಣ್ಣಿಗೆ ಕಾಣುವ, ನೀವಿರುವ ಸ್ಥಳದಲ್ಲಿ ಸಂಭವಿಸುವ ಚುನಾವಣಾ ಅಕ್ರಮಗಳ ಬಗ್ಗೆ ಅತ್ಯಂತ ಸುಲಭವಾಗಿ ಮತ್ತು ನಿಖರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು. ನಾಗರಿಕರು ಲೈವ್ ಫೋಟೋ ಅಥವಾ ವೀಡಿಯೊವನ್ನು ಸೆರೆಹಿಡಿದು ಅಪ್ಲೋಡ್ ಮಾಡಬೇಕು. ನೀತಿಸಂಹಿತೆ ಉಲ್ಲಂಘನೆಯ ಸ್ಯಾಕ್ಷ್ಯದ ಪುರಾವೆಗಳು ಸಿಕ್ಕ ತಕ್ಷಣ ಚುನಾವಣಾ ಯಂತ್ರವು ತಣವೇ ಕಾರ್ಯಾಚರಣೆಗಿಳಿಯುತ್ತದೆ. ಪ್ರತಿ ಸಿ-ವಿಜಿಲ್ ಪ್ರಕರಣದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು 100 ನಿಮಿಷಗಳ ಅವಧಿಯಲ್ಲಿ ತೆಗೆದುಕೊಂಡ ಕ್ರಮದೊಂದಿಗೆ ಪ್ರತ್ಯುತ್ತರ ನೀಡಲಾಗುತ್ತದೆ.
ಮೊಬೈಲ್ ಫೋನ್ನಲ್ಲಿ ಸಿ-ವಿಜಿಲ್ ಅಪ್ಲಿಕೇಶನ್ಗೆ ಸೈನ್ ಇನ್ ಮಾಡುವ ಮೂಲಕ ಫೋಟೋ/ಆಡಿಯೊ/ ವೀಡಿಯೊ ತೆಗೆದು ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು.
ತಮ್ಮ ವೈಯಕ್ತಿಕ ವಿವರಗಳು/ ಗುರುತನ್ನು ಬಹಿರಂಗಪಡಿಸದೆ ಅನಾಮಧೇಯವಾಗಿ ದೂರು ನೀಡಲು ಆ್ಯಪ್ ನಾಗರಿಕರಿಗೆ ಅವಕಾಶ ನೀಡುತ್ತದೆ.
ನೀತಿಸಂಹಿತೆ ಉಲ್ಲಂಘನೆಯನ್ನು ವರದಿ ಮಾಡಲು ಬಳಕೆದಾರರು ಸಿ-ವಿಜಿಲ್ನಲ್ಲಿ ತಮ್ಮ ಕ್ಯಾಮರಾ ಆನ್ ಮಾಡಿದಾಗ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಜಿಯೋ-ಟ್ಯಾಗಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ. ಇದು ಘಟನೆಯ ನಿಖರವಾದ ಸ್ಥಳವನ್ನು ತಿಳಿಯಲು ಸಹಾಯ ಮಾಡುತ್ತದೆ.
ಸಿ ವಿಜಿಲ್ ಇನ್ವೆಸ್ಟಿಗೇಟರ್ ಅಪ್ಲಿಕೇಷನ್ ಅನ್ನು ಫ್ಲೆಯಿಂಗ್ ಸ್ಕ್ವಾಡ್ಗಳು ಮತ್ತು ಸ್ಥಿರ ಕಣ್ಗಾವಲು ತಂಡದಂತಹ ಕೇತ್ರ ಘಟಕಗಳಿಗಾಗಿ ಸಿ ವಿಜಿಲ್ ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ಸೂಮೋಟೋ ಪ್ರಕರಣ ದಾಖಲಿಸಲು ಅವಕಾಶ ಮಾಡಿಕೊಡುತ್ತದೆ. ಫೇಕ್ ನ್ಯೂಸ್ ಬಗ್ಗೆ ದೂರು ಸಲ್ಲಿಸಲು ಅವಕಾಶವಿದೆ.
ದೂರು 15 ನಿಮಿಷಗಳಲ್ಲಿ ತನಿಖಾ ತಂಡಕ್ಕೆ ತಲುಪುತ್ತದೆ. ತನಿಖಾ ತಂಡಗಳು ತಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ದೂರುದಾರರಿಗೆ ವರದಿ ನೀಡುತ್ತವೆ. ಬಳಿಕ ಕ್ರಮ ಕೈಗೊಳ್ಳುತ್ತವೆ. ಕೈಗೊಂಡ ಕ್ರಮಗಳ ಬಗೆಗೂ ದೂರುದಾರರಿಗೆ ಮೊಬೈಲ್ ಮೂಲಕವೇ ಮಾಹಿತಿ ನೀಡಲಾಗುತ್ತದೆ.
ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡುವಲ್ಲಿ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕ್ರಮವಾಗಿ ಚಿತ್ರದುರ್ಗ ಹಾಗೂ ಬೆಂಗಳೂರು ಕೇಂದ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ವೀಡಿಯೋ, ಆಡಿಯೋ, ಫೋಟೋ ದಾಖಲೆ ಸಹಿತ ದೂರು ಕೊಡಲು ಅವಕಾಶವಿದೆ. 8-9 ಮಾದರಿ ದೂರು ನೀಡಬಹುದು. ಸರ್ಕಾರಿ ಅಧಿಕಾರಿಗಳು ನೀತಿಸಂಹಿತೆ ಉಲ್ಲಂಘಿಸುವ ದೂರುಗಳನ್ನು ದಾಖಲಿಸಬಹುದು. ದೂರುಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಚುನಾವಣೆ ಇನ್ನು ಒಂದು ತಿಂಗಳಿದ್ದು, ಸಾರ್ವಜನಿಕರು ಈ ಆಪ್ ಪ್ರಯೋಜನ ಪಡೆದು ಪಾರದರ್ಶಕ ಚುನಾವಣೆಗೆ ಸಹಕರಿಸಬೇಕು. |ಎ.ವಿ. ಸೂರ್ಯಸೇನ್, ವಿಶೇಷ ಚುನಾವಣಾಧಿಕಾರಿ