More

    ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ

    ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಹೊತ್ತು ತಂದಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಪಕ್ಷದ ಶಕ್ತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ಕಾರ್ಯಕರ್ತನಿಂದ, ಪ್ರಧಾನಮಂತ್ರಿಗಳ ಮಟ್ಟದವರೆಗೂ ಹಲವಾರು ಚರ್ಚೆ, ಪರಾಮರ್ಶೆಗಳನ್ನು ನಡೆಸಿಯೇ ಹೆಸರುಗಳನ್ನು ಘೊಷಿಸಿರುವುದು ವಿಶೇಷ. ಈ ಆಯ್ಕೆ ಪ್ರಕ್ರಿಯೆ ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವ, ಶಿಸ್ತಿಗೆ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿ ಅವರ 21ನೇ ಶತಮಾನದ ಕನಸಿನ ಭಾರತಕ್ಕೆ ಸರ್ವ ಸಮುದಾಯಗಳನ್ನು ಒಳಗೊಂಡ ಸಾಮಾಜಿಕ ನ್ಯಾಯ ಒದಗಿಸುವುದರೊಂದಿಗೆ, ಮುಂದಿನ ತಲೆಮಾರಿಗೆ ನಾಯಕರನ್ನು ಬೆಳೆಸಬಲ್ಲ ಉದ್ದೇಶ ಇದರಲ್ಲಿ ವ್ಯಕ್ತವಾಗಿರುವುದು ಸ್ಪಷ್ಟ.

    ಈ ಬಾರಿ 52 ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದ್ದು, ಸಂಘಟನಾ ಚಾತುರ್ಯದಿಂದಲೇ ಮುನ್ನೆಲೆಗೆ ಬಂದಿರುವ ಅನೇಕ ಉಮೇದುವಾರರಿಗೆ ಅವಕಾಶ ಕಲ್ಪಿಸಲಾಗಿದೆ. 21ನೇ ಶತಮಾನದ ಅಭಿಲಾಷೆಗಳಿಗೆ ಅನುಗುಣವಾಗಿ ನಾಯಕರನ್ನು ಬೆಳೆಸುವ ಅನಿವಾರ್ಯತೆ ಎಲ್ಲ ಪಕ್ಷಗಳಿಗೂ ಇದೆ. ಆದರೆ, ಉಳಿದ ಪಕ್ಷಗಳು ತಮ್ಮದೇ ಕುಟುಂಬದ ಕುಡಿಗಳನ್ನು ಮುಂದಿನ ಚುನಾವಣೆಗೂ ನಿಲ್ಲಿಸುವ ಪರಿಪಾಠವನ್ನೇ ಮುಂದುವರಿಸಿದ್ದರೆ, ಬಿಜೆಪಿ ಮಾತ್ರ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸಿ, ಜನರ ನಾಡಿಮಿಡಿತ, ಕಷ್ಟ-ಕಾರ್ಪಣ್ಯಗಳಿಗೆ ಧ್ವನಿಯಾಗಬಲ್ಲ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುತ್ತಿರುವುದು ಭಾರತದ ರಾಜಕೀಯದ ಅಧ್ಯಯನ ನಡೆಸುವವರಿಗೆ ಸ್ಪೂರ್ತಿ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹೇಳುವಂತೆ, ‘ಭಾರತದ ಪ್ರತಿಯೊಬ್ಬ ಪ್ರಜೆಗೂ ಎಲ್ಲ ರೀತಿಯ ಸೌಲಭ್ಯ ದೊರಕಬೇಕು, ರಾಜಕೀಯವೂ ಸೇರಿದಂತೆ’ ಎಂಬುದು ಬಿಜೆಪಿಯ ಮೂಲಮಂತ್ರ. ತಮ್ಮ ತಮ್ಮ ಹೆಸರಿನ ಮುಂದೆ ಅಥವಾ ಹಿಂದೆ ಇರುವ ಸರ್​ನೇಮ್ಳ ಆಧಾರದಲ್ಲಿ ಅವಕಾಶ ದಕ್ಕಿಸಿಕೊಳ್ಳುವ ಪಕ್ಷಗಳಿಗಿಂತ ಬಿಜೆಪಿ ವಿಭಿನ್ನ.

    ಹಿರಿಯರ ಮಾದರಿ ನಡೆ: ಕರ್ನಾಟಕದಲ್ಲಿ ಬಿಜೆಪಿ ಇಷ್ಟೊಂದು ಪ್ರಬಲವಾಗಿ ಬೆಳೆಯಲು ಬಿ.ಎಸ್. ಯಡಿಯೂರಪ್ಪ, ಅನಂತ್ ಕುಮಾರ್, ಕೆ.ಎಸ್.ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಂತಹ ಅನೇಕರು ಕಾರಣ. ಹೊಸ ಪೀಳಿಗೆಗೆ, ಹೊಸ ರಕ್ತಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಅವರ ನಿರ್ಣಯ ನಿಜಕ್ಕೂ ಶ್ಲಾಘನೀಯ. ಬಿಜೆಪಿಯನ್ನು ಕಚ್ಟಠಿಢ ಡಿಜಿಠಿಜ ಛಜ್ಛಿ್ಛ್ಟnಛಿ ಎನ್ನುವುದು ಇಂತಹುದ್ದೇ ಕಾರಣಗಳಿಗಾಗಿ. ಇದು, ಸಂಘ ಪರಿವಾರದ ಉನ್ನತ ರಾಜಕೀಯ ಮೌಲ್ಯಗಳಿಗೂ, ಇತರ ಪಕ್ಷಗಳ ಕುಟುಂಬಪ್ರೇಮಕ್ಕೂ ಇರುವ ಅಜಗಜಾಂತರ ವ್ಯತ್ಯಾಸ.

    ಚುನಾವಣಾ ರಾಜಕೀಯದಲ್ಲಿ ದೊಡ್ಡ ದೊಡ್ಡ ಸಮುದಾಯಗಳಿಗೆ ನೀಡುವ ಆದ್ಯತೆಯನ್ನು ಸಣ್ಣ ಸಮುದಾಯಗಳಿಗೂ ಒದಗಿಸಿದಲ್ಲಿ ಅವರಿಗೆ ದೊರಕುವ ಸಾಮಾಜಿಕ ಸ್ಥಾನಮಾನ, ರಾಜಕೀಯ ಪ್ರಾತಿನಿಧ್ಯ ಗಣನೀಯ ಬದಲಾವಣೆಗಳಿಗೆ ಕಾರಣವಾಗಲಿದೆ. ಈ ಬಾರಿ ಅಂತಹ ಎಷ್ಟೋ ಸಮುದಾಯಗಳಿಗೆ ಆದ್ಯತೆ ನೀಡಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ. ಅತ್ಯಂತ ಸಣ್ಣ ಪ್ರಮಾಣದ ಆದಿ ದ್ರಾವಿಡ ಸಮುದಾಯದ ಭಾಗೀರಥಿ ಮುರುಳ್ಯ ಅವರನ್ನು ಸುಳ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಘೊಷಿಸಿರುವುದು ಇದಕ್ಕೊಂದು ಉದಾಹರಣೆ.

    ಕೇಂದ್ರ -ರಾಜ್ಯ ಎರಡೂ ಕಡೆ ಬಿಜೆಪಿ ಏಕೆ ಅವಶ್ಯಕ?: ಕರ್ನಾಟಕವು ಕಳೆದ 70 ವರ್ಷಗಳಲ್ಲಿ ಪಡೆದುಕೊಂಡಿರದಿದ್ದ ಅನುದಾನವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಡೆದುಕೊಂಡಿದ್ದನ್ನು ಅಂಕಿಅಂಶಗಳೇ ದೃಢೀಕರಿಸುತ್ತವೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಪ್ರಯತ್ನದ ಫಲವಾಗಿ, ದಶಕಗಳಿಂದ ನನೆಗುದಿಯಲ್ಲಿದ್ದ ಕಳಸಾ ಬಂಡೂರಿ ಡಿ.ಪಿ.ಆರ್​ಗೆ ಒಪ್ಪಿಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿರುವುದರಿಂದ ರಾಜ್ಯದ ನೀರಾವರಿ, ಕೃಷಿ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಮೆಟ್ರೋ, ಸಬ್ ಅರ್ಬನ್ ರೈಲು, ಸ್ಯಾಟಲೈಟ್ ಟೌನ್ ರಿಂಗ್ ರೋಡ್, ಭೂ ಸಾರಿಗೆ ಪ್ರಾಧಿಕಾರ ಸ್ಥಾಪನೆಗೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಹತ್ವದ ಕೊಡುಗೆಗಳನ್ನು ನೀಡಲಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯ ಮಾದರಿಗೆ ಇದು ಸಾಕ್ಷಿ.

    ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ, ರಾಷ್ಟ್ರೀಯ ಹೆದ್ದಾರಿ – 64 ಸಾವಿರ ಕೋಟಿ ರೂ.; ರೇಲ್ವೆ – 3,420 ಕೋಟಿ ರೂ.; ಸ್ಮಾರ್ಟ್ ಸಿಟಿ – 2,500 ಕೋಟಿ ರೂ.; ಕಿಸಾನ್ ಸಮ್ಮಾನ ನಿಧಿ- 11,000 ಕೋಟಿ ರೂ. (53 ಲಕ್ಷ ಫಲಾನುಭವಿಗಳು) ದೊರೆತಿದೆ. ಇನ್ನಿತರ ಯೋಜನೆಗಳಲ್ಲಿ ಯುಪಿಎ ಅವಧಿಗಿಂತ 2-3ಪಟ್ಟು ಅಧಿಕ ಅನುದಾನ ನೀಡಲಾಗಿದೆ. ಕರ್ನಾಟಕದಲ್ಲಿ ಕಳೆದ 70 ವರ್ಷಗಳಲ್ಲಿ 25 ಲಕ್ಷ ಮನೆಗಳಿಗೆ ಮಾತ್ರ ಇದ್ದ ನಲ್ಲಿ ನೀರಿನ ಸಂಪರ್ಕ ಬಿಜೆಪಿ ಸರ್ಕಾರ ಬಂದ ನಂತರ 55 ಲಕ್ಷ ಮನೆಗಳಿಗೆ ತಲುಪಿಸಲಾಗಿದೆ.

    2014ಕ್ಕೂ ಮುಂಚೆ ಕರ್ನಾಟಕದಲ್ಲಿದ್ದ ಏರ್​ಪೋರ್ಟ್​ಗಳು 2 ಮಾತ್ರ. 2014ರ ನಂತರ ಕೇವಲ 9 ವರ್ಷಗಳ ಅವಧಿಯಲ್ಲಿ ನಿರ್ವಣಗೊಂಡ ಏರ್​ಪೋರ್ಟಗಳ ಸಂಖ್ಯೆ ಹತ್ತು. 2014 ರ ಮುಂಚೆ ಬೆಂಗಳೂರು ನಗರದ ಮೆಟ್ರೋ ಸಂಪರ್ಕ ಕೇವಲ 7 ಕಿಮೀ, ಪ್ರಸ್ತುತ ಬೆಂಗಳೂರು 70 ಕಿಮೀ ಮೆಟ್ರೋ ರೈಲು ಸಂಪರ್ಕ ವ್ಯಾಪ್ತಿಯನ್ನು ಹೊಂದಿದೆ. ನರೇಂದ್ರ ಮೋದಿ ಸರ್ಕಾರ ರಾಜ್ಯದ ಮೂಲಸೌಕರ್ಯ ಕ್ಷೇತ್ರದಲ್ಲಿ ಅಗಾಧ ಸುಧಾರಣೆಗಳನ್ನು ಕೈಗೊಂಡಿದೆ.

    ಬಿಜೆಪಿ ಆಡಳಿತದಲ್ಲಿ, ರಾಜ್ಯದ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಕಳೆದ 70 ವರ್ಷಗಳಲ್ಲಿ ಕೈಗೊಳ್ಳಲಾಗದ ಸಾಧನೆಗಳು ಕೇವಲ 8 ವರ್ಷಗಳಲ್ಲಿ ಸಾಧಿಸಿದ್ದು ಐತಿಹಾಸಿಕ. ರಾಷ್ಟ್ರೀಯ ಹೆದ್ದಾರಿ ನಿರ್ವಣ, ಅನುದಾನ ಪಡೆದುಕೊಳ್ಳುವಲ್ಲಿ ರಾಜ್ಯವು ಗಣನೀಯ ಪ್ರಗತಿ ಸಾಧಿಸಿದ್ದು, 1,16,000 ಕೋಟಿ ರೂ.ಗಳ 4 ಸಾವಿರ ಕಿಮೀಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಸ್ತುತ ಅತ್ಯಂತ ವೇಗದಲ್ಲಿ ನಡೆಯುತ್ತಿದೆ.

    ಕೇಂದ್ರ ಸರ್ಕಾರದ ಆಯವ್ಯಯದಲ್ಲಿ, ಕರ್ನಾಟಕದಲ್ಲಿ ರೈಲ್ವೇ ಅಭಿವೃದ್ಧಿಗೆ ಯುಪಿಎ ಆಡಳಿತದ ಕೊನೆಯ 5ವರ್ಷಗಳಲ್ಲಿ ಒದಗಿಸಿರುವ ಮೊತ್ತಕ್ಕಿಂತ 9 ಪಟ್ಟು ಅಧಿಕ ಅನುದಾನ ನೀಡಿದ್ದು, ರೈಲ್ವೇ ಆಧುನೀಕರಣ,ಅಭಿವೃದ್ಧಿಗೆ ಇದುವರೆಗೆ ನೀಡಿದ ಅನುದಾನದಲ್ಲಿಯೇ ಅಧಿಕವಾಗಿದ್ದು, ರಾಜ್ಯದ 55 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವುದರೊಂದಿಗೆ, ದಕ್ಷಿಣ ಭಾರತದ ಪ್ರಥಮ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು ಮೈಸೂರು, ಬೆಂಗಳೂರು ಮತ್ತು ಚೆನ್ನೈ ನಡುವೆ ಒದಗಿಸಿದ್ದು, ರೈಲ್ವೆ ಲೈನ್​ಗಳನ್ನೂ ಯುಪಿಎ ಅವಧಿಗಿಂತ ಎರಡು ಪಟ್ಟು ಅಧಿಕಗೊಳಿಸಲಾಗಿದೆ.

    2019ರಲ್ಲಿ ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆಗೊಂಡ ಬೆಂಗಳೂರು ಏರ್​ಪೋರ್ಟ್ ಟರ್ವಿುನಲ್ -2 ನಿರ್ಮಾಣ ಕಾಮಗಾರಿ ಕೇವಲ 3 ವರ್ಷಗಳ ಅವಧಿಯಲ್ಲಿ ಕಾರ್ಯಸೇವೆಗೆ ಅಣಿಯಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಿಗಳು ಉದ್ಘಾಟನೆಗೊಳಿಸಿದ್ದು ವಿಶೇಷ.

    ಬೆಂಗಳೂರಿನ ಸಾರ್ವಜನಿಕ ಸಂಚಾರವು ಬಿಎಂಟಿಸಿ ಬಸ್ ಕೇಂದ್ರಿತವಾಗಿದ್ದು, ಇದಕ್ಕೆ ಪೂರಕವಾಗಿ ಫೇಮ್ ಯೋಜನೆ ಅಡಿಯಲ್ಲಿ ನಗರಕ್ಕೆ ಪರಿಸರಸ್ನೇಹಿ 1500 ಬಸ್​ಗಳನ್ನು ಕೇಂದ್ರ ಸರ್ಕಾರ ಒದಗಿಸಿದ್ದು, ಈಗಾಗಲೇ 300 ಇಂತಹ ಬಸ್​ಗಳು ನಗರದ ನಾಗರಿಕರ ಸೇವೆಯಲ್ಲಿ ಇವೆ.

    ಬೆಂಗಳೂರು ಸಬ್ ಅರ್ಬನ್ ರೈಲಿನ ಕುರಿತು ಕಳೆದ 40 ವರ್ಷಗಳಿಂದ ಕೇವಲ ಪೊಳ್ಳು ಭರವಸೆಗಳನ್ನು ಕೇಳಿದ್ದ ಬೆಂಗಳೂರಿನ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಕೇವಲ 40 ತಿಂಗಳ ಅವಧಿಯಲ್ಲಿ ಈ ಯೋಜನೆ ಸಂಪೂರ್ಣ ಸಾಕಾರಗೊಳ್ಳುತ್ತಿದೆ.

    ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ, ತುಮಕೂರಿಗೆ ಎಚ್​ಎಎಲ್ ಫ್ಯಾಕ್ಟರಿ, ಮೈಸೂರಿಗೆ ಸೆಮಿ ಕಂಡಕ್ಟರ್ ಫ್ಯಾಬ್ ಯೂನಿಟ್, ಬೆಂಗಳೂರಿಗೆ ಬಹುಆಯಾಮದ ಲಾಜಿಸ್ಟಿಕ್ಸ್ ಪಾರ್ಕ್, ರಾಜ್ಯದ 11 ಲಕ್ಷ ಕುಟುಂಬಗಳಿಗೆ ಪಿಎಂ ಆವಾಸ್ ಯೋಜನೆಯಲ್ಲಿ ಗೃಹ ನಿರ್ವಣ, 50 ಲಕ್ಷ ಫಲಾನುಭವಿಗಳಿಗೆ ಪಿ.ಎಂ ಕಿಸಾನ್ ನಿಧಿಯಲ್ಲಿ ಪರಿಹಾರ ವಿತರಿಸಿದ್ದು ವಿಶೇಷ.

    ರಾಜ್ಯ-ದೇಶದ ಸುರಕ್ಷತೆಗೆ ಕಂಟಕವಾಗಿದ್ದ, ಪಿಎಫ್​ಐ ಮೇಲಿನ 1600 ಕೇಸ್​ಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂಪಡೆದ ಪರಿಣಾಮ ದೇಶದಲ್ಲಿ ಹಿಂಸಾತ್ಮಕ ಕಾರ್ಯಗಳು ವೃದ್ಧಿಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ನರೇಂದ್ರ ಮೋದಿ, ಅಮಿತ್ ಷಾ ದಿಟ್ಟ ನೇತೃತ್ವದಲ್ಲಿ ಪಿಎಫ್​ಐ ಅನ್ನು ಬಗ್ಗುಬಡಿದಿದ್ದು ಶ್ಲಾಘನೀಯ.

    ಕರ್ನಾಟಕವು ದೇಶದ ಅತ್ಯಂತ ಪ್ರಗತಿಶೀಲ ರಾಜ್ಯವಾಗಿದ್ದು, ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಬಲ್ಲ, ಹೆಚ್ಚು ಸಾರ್ಟಪ್, ಯೂನಿಕಾರ್ನ್​ಗಳನ್ನು ಹೊಂದಿರುವ ಅಗ್ರಗಣ್ಯ ರಾಜ್ಯವಾಗಿದ್ದು, ಕೇಂದ್ರ-ರಾಜ್ಯದ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳ ಸಮರ್ಪಕ, ಜನಪರ ನೀತಿಗಳೇ ಕಾರಣ. ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಬಲ್ಲ ಕರ್ನಾಟಕದ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂಬುದು ಸ್ಪಷ್ಟವಾಗಿದ್ದು, ರಾಜ್ಯದ ಸಮಗ್ರ, ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲ ಸಮರ್ಥ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

    (ಲೇಖಕರು ಬೆಂಗಳೂರು ದಕ್ಷಿಣ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು)

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts