

ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದ ಯಾವ ಭಾಗದಲ್ಲಿ ಹೆಚ್ಚು ಫಸಲು ತೆಗೆಯಬಹುದೆಂದು ಲೆಕ್ಕಹಾಕಿದ್ದು, ಆ ಪ್ರಕಾರ ದೃಷ್ಟಿನೆಟ್ಟು ಕಾರ್ಯಾಚರಣೆ ಆರಂಭಿಸಿವೆ.
ಚುನಾವಣೆಯಿಂದ ಚುನಾವಣೆಗೆ ಲೆಕ್ಕಾಚಾರ ಬದಲಾಗುವುದು ಸಹಜ. 2008ರಿಂದೀಚೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಸಮಸ್ತ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿತ್ತು. ಅದೇ ರೀತಿ ಕಾಂಗ್ರೆಸ್ ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿತ್ತು. ಜೆಡಿಎಸ್ ಪ್ರಾಬಲ್ಯ ಮೊಟಕು ಗೊಳಿಸುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿತ್ತು. ಆದರೆ, ಈ ಚುನಾವಣೆಯಲ್ಲಿ ಗುರಿ ಅದಲು ಬದಲಾಗಿದೆ.
ಕಾಂಗ್ರೆಸ್ನ ಹಿರಿಯ ಮುಖಂಡರೇ ಹೇಳುವಂತೆ, ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತದೇ ಆ ಪಕ್ಕೆ ಅಧಿಕಾರ ಎಂಬುದು ಸ್ಪಷ್ಟ. ಇದೇ ಕಾರಣಕ್ಕೆ ನಾವು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ ಎಂದು ವಿವರಿಸುತ್ತಾರೆ.
ಇತ್ತ ಬಿಜೆಪಿ ದಕ್ಷಿಣ ಕರ್ನಾಟಕದಲ್ಲಿ ತನ್ನ ಬೇರು ಗಟ್ಟಿಮಾಡಲು ಗಮನಕೊಟ್ಟಿದ್ದು, ಜೆಡಿಎಸ್ನ ಭದ್ರಕೋಟೆ ಎನಿಸಿಕೊಂಡಲ್ಲಿ ಕೆಲವು ಕಡೆ ತ್ರಿಕೋನ ಸ್ಪರ್ಧೆಯ ವಾತಾವರಣಕ್ಕೆ ತಂದುಕೊಂಡಿದೆ. ಅಲ್ಲದೆ, ಹೆಚ್ಚಿನ ಸ್ಥಾನ ಪಡೆಯಬೇಕೆಂದು ಗುರಿಹಾಕಿಕೊಂಡು ಕಾಯೋರ್ನ್ಮುಖವೂ ಆಗಿದೆ. ಮತದಾನಕ್ಕಿಂತ ಮುನ್ನ ಸಿಗುವ ಹೆಚ್ಚಿನ ಸಮಯಾವಕಾಶದಲ್ಲಿ ದಕ್ಷಿಣ ಹಾಗೂ ಮಧ್ಯ ಕರ್ನಾಟಕಕ್ಕೆ ಹೆಚ್ಚಿನ ಗಮನ ಕೊಡುತ್ತಿರುವುದು ವಿಶೇಷ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಕಳೆದುಕೊಳ್ಳಬಹುದಾದ ಸಂಖ್ಯೆಯನ್ನು ದಣದಲ್ಲಿ ದಕ್ಕಿಸಿಕೊಳ್ಳುವುದು ಬಿಜೆಪಿ ವರಿಷ್ಠರ ರಾಜಕೀಯ ಗುಣಾಕಾರವಾಗಿದೆ.
ಇದನ್ನೂ ಓದಿ: ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ
ಈ ಪ್ರದೇಶದ ವ್ಯಾಪ್ತಿಯ 56 ಸ್ಥಾನಗಳಲ್ಲಿ ಬಿಜೆಪಿ ಬಲಯುತವಾಗಿತ್ತು. 2018ರಲ್ಲಿ ಬಿಜೆಪಿ ದೊಡ್ಡ ಲಾಭ ಪಡೆದುಕೊಂಡಿತ್ತು. ಪ್ರಸ್ತುತ ಬಿಜೆಪಿ ಬಿಜೆಪಿ 40 ಸ್ಥಾನದಲ್ಲಿ ತನ್ನ ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 15 ಹಾಗೂ ಜೆಡಿಎಸ್ ಒಬ್ಬ ಶಾಸಕರನ್ನು ಹೊಂದಿದೆ. ಈ ಬಾರಿ ಕಾಂಗ್ರೆಸ್ ಇಲ್ಲಿ 30ರ ಗಡಿ ದಾಟುವ ಟಾರ್ಗೆಟ್ ಹಾಕಿಕೊಂಡಿದೆ. ಬಿಜೆಪಿ ಇರುವ ಸ್ಥಾನ ಉಳಿಸಿಕೊಳ್ಳುವಲ್ಲಿ ಹೋರಾಟ ನಡೆಸುತ್ತಿದೆ.
ಮೈಸೂರು ಕರ್ನಾಟಕವೆಂದು ಪರಿಗಣಿಸುವ ಪ್ರದೇಶದಲ್ಲಿ 46 ಸ್ಥಾನ ಗಳಿದ್ದು, ಬಿಜೆಪಿ 9, ಕಾಂಗ್ರೆಸ್ 14ಸ್ಥಾನಗಳಲ್ಲಿ, ಹಾಗೂ ಜೆಡಿಎಸ್ 21 ಸ್ಥಾನ ಹೊಂದಿದ್ದರೆ 2 ಕಡೆಗಳಲ್ಲಿ ಇತರರಿದ್ದಾರೆ. ಬಿಜೆಪಿ ಈ ಸಾಧನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. 16, 20ರ ವರೆಗೂ ಸಾಧನೆ ತೋರಬೇಕೆಂಬ ಪ್ರಯತ್ನವೂ ಇದೆ.
ಇದನ್ನೂ ಓದಿ: ರಾಷ್ಟ್ರೀಯ, ರಾಜ್ಯ ಪಕ್ಷಗಳ ಸ್ಥಾನಮಾನ ಬದಲಾಗಿದ್ದೇಕೆ?
ಈ ಭಾಗದಲ್ಲಿ 41 ಸ್ಥಾನಗಳಿದ್ದು, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಆರಂಭದಲ್ಲಿ ಸಮಬಲ ಪೈಪೋಟಿ ಇದ್ದರೂ ಪ್ರಸ್ತುತ ಬಿಜೆಪಿ ಕಳೆಗುಂದಿದೆ. ಪ್ರಸ್ತುತ ಬಿಜೆಪಿ 19, ಕಾಂಗ್ರೆಸ್ 18 ಕಡೆಗಳಲ್ಲಿ ತನ್ನ ಬಲ ಹೊಂದಿದ್ದು, ಇಲ್ಲಿ ಜೆಡಿಎಸ್ ಸಾಧನೆ 4 ಕಡೆಗಳಲ್ಲಿದೆ. ಜೆಡಿಎಸ್ನ ಈ ಸ್ಥಾನಗಳ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಕಣ್ಣಿಟ್ಟಿವೆ. ಜತೆಗೆ ಕಾಂಗ್ರೆಸ್ ತನ್ನ ಗುರಿಯನ್ನು 25ರವರೆಗೂ ಹಿಗ್ಗಿಸಿಕೊಳ್ಳುವ ಗುರಿಹಾಕಿಕೊಂಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯ 28 ಸ್ಥಾನ ಸೇರಿ ನಗರಕ್ಕೆ ಹೊಂದಿಕೊಂಡಂತಿರುವ 4 ಸ್ಥಾನ ಸೇರಿಸಿ 32 ಸ್ಥಾನಗಳ ಪೈಕಿ ಕಾಂಗ್ರೆಸ್ ಸಾಧನೆ ಕಳೆದ ಬಾರಿ ಉತ್ತಮವಾಗಿತ್ತು. ಕಾಂಗ್ರೆಸ್ 17 ಸ್ಥಾನ ಗೆದ್ದಿದ್ದರೆ, ಬಿಜೆಪಿ 11ಕ್ಕೆ ಸೀಮಿತವಾಗಿತ್ತು. ಜೆಡಿಎಸ್ 4 ಕಡೆ ಗೆದ್ದಿತ್ತು. ಆದರೆ ಬದಲಾದ ಬೆಳವಣಿಗೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಬಿಜೆಪಿ 15 ಕಡೆ, ಕಾಂಗ್ರೆಸ್ ಸದಸ್ಯರು 13 ಹಾಗೂ ಜೆಡಿಎಸ್ ಮೂರು ಸದಸ್ಯರನ್ನು ಹೊಂದಿದೆ. ಈ ಬಾರಿ ಕಾಂಗ್ರೆಸ್ಗೆ ಸಮರ್ಥ ಅಭ್ಯರ್ಥಿಗಳ ಗಂಭೀರ ಕೊರತೆ ಎದುರಿಸಿತು. ಹಾಗೆಯೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ವಲಸೆ ಹೋದವರು ಬಿಜೆಪಿಯಲ್ಲೇ ಉಳಿದುಕೊಂಡ ಪರಿಣಾಮ ಬಿಜೆಪಿ ಸ್ಥಾನ 20ರವರೆಗೂ ವಿಸ್ತರಿಸುವ ಪ್ರಯತ್ನದಲ್ಲಿದೆ.
13 ಸ್ಥಾನಗಳು ಕರಾವಳಿ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಈ ಪರಿಧಿಯಲ್ಲಿ ಬಿಜೆಪಿ ಅಗ್ರಗಣ್ಯ. 2018ರಲ್ಲಿ ಬಿಜೆಪಿ 13 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಗೊಂದಲಗಳ ನಡುವೆ ಈ ಸ್ಥಾನಗಳು ಆಚೀಚೆಯಾಗದಂತೆ ಬಿಜೆಪಿ ಸಾಕಷ್ಟು ಬೆವರು ಹರಿಸಿದೆ. ಕಾಂಗ್ರೆಸ್ ಪ್ರಯೋಗಗಳನ್ನು ನಡೆಸಿದ್ದು, ಲಾಭದ ನಿರೀೆಯಲ್ಲಿದೆ.
ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಬಾರಿ ಬಿಜೆಪಿ ಪ್ರಬಲವಾಗಿತ್ತು. 36 ಸ್ಥಾನಗಳ ಪೈಕಿ 25 ಕಡೆ ಬಿಜೆಪಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 8ಕ್ಕೆ ತೃಪ್ತಿಪಟ್ಟಿತ್ತು. ಆದರೆ, ಇಲ್ಲಿ ಈ ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿರುವುದನ್ನು ಕಂಡು ಬಿಜೆಪಿ ಹೊಸ ತಂತ್ರ ಹೆಣೆಯಲು ಆರಂಭಿಸಿದೆ.