10 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್ ರೀತಿ ಕೊಲ್ಲುವುದಾಗಿ ಸಿಎಂ ಯೋಗಿಗೆ ಬೆದರಿಕೆ! Yogi Adityanath

Yogi Adityanath
Published on

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ ​ಅವರನ್ನು ಕೊಂದ ರೀತಿಯಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ( Yogi Adityanath ) ಅವರನ್ನು ಕೊಲೆ ಮಾಡುತ್ತೇವೆ ಎಂಬ ಬೆದರಿಕೆ ಕರೆಯನ್ನು ಮುಂಬೈ ಪೊಲೀಸರು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಶನಿವಾರ (ನ.02) ಸಂಜೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ. ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ 10 ದಿನಗಳಲ್ಲಿ ಯೋಗಿ ಆದಿತ್ಯನಾಥ್​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್​ ರೀತಿಯಲ್ಲೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿರುವುದಾಗಿ ತಿಳಿದುಬಂದಿದೆ.

ಅಂದಹಾಗೆ ಅಕ್ಟೋಬರ್ 12 ರಂದು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕ್ ಅವರನ್ನು ಅವರ ಮಗ ಹಾಗೂ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಬಾಬಾ ಸಿದ್ದಿಕ್​ ಅವರು ಬಾಲಿವುಡ್​ ನಟ ಸಲ್ಮಾನ್​ ಖಾನ್​ರೊಂದಿಗೆ ನಿಕಟ ಸಂಬಂಧ ಹೊಂದಿದ್ದಕ್ಕೆ ಕೊಂದಿದ್ದಾಗಿ ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಒಪ್ಪಿಕೊಂಡಿತ್ತು.

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಸಲ್ಮಾನ್​ ಖಾನ್​ಗೂ ಬೆದರಿಕೆ ಸಂದೇಶ ಬಂದಿತು. ಬೆದರಿಕೆ ಹಾಕಿದ ವ್ಯಕ್ತಿಯನ್ನು ಬುಧವಾರ ಬಂಧಿಸಿದ ಕೆಲವೇ ದಿನಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಕರೆ ಬಂದಿದೆ. ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈನ ಬಾಂದ್ರಾ ಪೂರ್ವದ ಅಜಮ್ ಮೊಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ.

ಅದೇ ರೀತಿ, ಸಲ್ಮಾನ್ ಖಾನ್ ಮತ್ತು ಬಾಬಾ ಸಿದ್ದಿಕ್ ಅವರ ಪುತ್ರ, ಬಾಂದ್ರಾ ಪೂರ್ವ ಎನ್‌ಸಿಪಿ ಶಾಸಕ ಜೀಶನ್ ಸಿದ್ದಿಕ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ 20 ವರ್ಷದ ವ್ಯಕ್ತಿಯನ್ನು ನೋಯ್ಡಾದಲ್ಲಿ ಮಂಗಳವಾರ ಬಂಧಿಸಲಾಗಿದೆ. ಆತನನ್ನು ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾಗಿದೆ. ಇದೇ ರೀತಿ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net