

‘ದುನಿಯಾ’ ಚಿತ್ರದಲ್ಲಿ ‘ಲೂಸ್ ಮಾದ’ ಪಾತ್ರದ ಮೂಲಕ ರಾತ್ರೋರಾತ್ರಿ ಬೇಡಿಕೆಯ ನಟರಾದವರು ಯೋಗಿ. ಇಂದು ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ಗಳ ತರಹ ಯೋಗಿ, ಸಹ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಮಧ್ಯೆ, ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರತಂಡವು ಯೋಗಿ ಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಿಕೊಂಡು ಉಡುಗೊರೆ ನೀಡಿದೆ. ಅದೇ ರೀತಿ ಒಂದಷ್ಟು ಹೊಸ ಸಿನಿಮಾಗಳೂ ಘೋಷಣೆ ಆಗಿವೆ.
ಆ ಪೈಕಿ ನೀನಾಸಂ ಮಂಜು ನಿರ್ದೇಶನದಲ್ಲಿ ಸಿದ್ಧವಾಗಲಿರುವ ‘ಶೋಗನ್‘ ಸಿನಿಮಾ ಸಹ ಒಂದು. ಯೋಗಿ ಜನ್ಮದಿನದ ಪ್ರಯುಕ್ತ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ವಿಭಿನ್ನ ರೀತಿಯ ಫಸ್ಟ್ಲುಕ್ ಗಮನಸೆಳೆಯುತ್ತಿದೆ.
ಈ ಚಿತ್ರದಲ್ಲಿ ಬೈಕ್ ರೇಸರ್ ಆಗಿ ಯೋಗಿ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಎಲ್ಲ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಯೋಗಿ, ಬೈಕರ್ ಆಗಿ ಈವರೆಗೂ ಕಾಣಿಸಿಕೊಂಡಿಲ್ಲ. ಇದೀಗ ಶೋಗನ್ ಸಿನಿಮಾದಲ್ಲಿ ಆ ಚಾಲೆಂಜ್ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಗುರುಪೌರ್ಣಮಿಯಂದು ದಿಗ್ಗಜರಿಗೆ ನಮನ ಸಲ್ಲಿಸಿದ ತಮನ್
ರವಿಕಿರಣ್ ಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ಎಂ ಪ್ರಕಾಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮ್ಯಾಥ್ಯುಸ್ ಮನು ಸಂಗೀತ ನೀಡಲಿದ್ದಾರೆ. ಸದ್ಯಕ್ಕೆ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ, ಚಿತ್ರೀಕರಣಕ್ಕೆ ಚಾಲನೆ ನೀಡಿಲ್ಲ. ಎಲ್ಲ ಅಂದುಕೊಂಡಂತೆ ಆದರೆ, ಪಾತ್ರವರ್ಗದ ಆಯ್ಕೆ ಮಾಡಿಕೊಂಡು, ಆಗಸ್ಟ್ ಅಥವಾ ಸೆಪ್ಟಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.