ಸಿನಿಮಾ

ಯೋಗ ಕ್ಷೇಮ | ಜೈನದರ್ಶನದ ಮೂಲಾಧಾರ ಯಮ-ನಿಯಮ

ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ- ಇವು ಯಮ. ಶೌಚ, ಸಂತೋಷ, ತಪ, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿದಾನ- ಇವು ನಿಯಮ.

ನೈತಿಕತೆಯ ಪ್ರಾಮುಖ್ಯವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡು, ಅದನ್ನು ಸರಿಯಾಗಿ ಬೆಳೆಸಿಕೊಳ್ಳಬೇಕು. ಅದರ ಸದೃಢ ತಳಹದಿಯ ಮೇಲೆ ನಮ್ಮ ಆಧ್ಯಾತ್ಮಿಕ ಜೀವನವನ್ನು ಕಟ್ಟಬೇಕು. ಆಗ ಅರ್ಧ ಯುದ್ಧವನ್ನು ಗೆದ್ದಂತೆ. ಸೈದ್ಧಾಂತಿಕವಾಗಿ ಆಧ್ಯಾತ್ಮಿಕ ಜೀವನವನ್ನು ಅರ್ಥಮಾಡಿಕೊಳ್ಳಲು ಅನವಶ್ಯಕವಾಗಿ ನಮ್ಮ ಗಮನವನ್ನು ಹರಿಸುತ್ತೇವೆ. ಅದರ ಬಗ್ಗೆ ಬಹಳಷ್ಟು ಆಲೋಚಿಸುತ್ತೇವೆ. ಆದರೆ ಅತ್ಯಂತ ಮುಖ್ಯವಾದ ನೈತಿಕ ಜೀವನವನ್ನೇ ಕಡೆಗಣಿಸುತ್ತೇವೆ. ಆದಕಾರಣವೇ ಯೋಗದಲ್ಲಿ ಕ್ಲೇಶ ನಿವಾರಣೆಗೆ ಬಹು ಪ್ರಾಮುಖ್ಯ ನೀಡಲಾಗಿದೆ.

ಅನೇಕ ವೇಳೆ ನಮ್ಮೊಳಗಿನ ಕ್ಲೇಶ ನಿವಾರಣೆಗೆ ನಾವು ಗಮನಕೊಡದೆ ಇತರರ ಕ್ಲೇಶ ನಿವಾರಣೆ ಮಾಡಲು ಹೋಗುತ್ತೇವೆ. ಇದರಿಂದ ನಮ್ಮ ಕ್ಲೇಶವು ಅಧಿಕವಾಗುವುದರ ಜತೆಗೆ ಇತರರ ಕ್ಲೇಶವೂ ಅಧಿಕವಾಗಬಹುದು. ನಿಜವಾಗಿಯೂ ವ್ಯಷ್ಟಿ ಬದಲಾವಣೆಯಿಂದ ಸಮಷ್ಠಿ ಬದಲಾವಣೆ ಸಾಧ್ಯ. ನಮ್ಮ ಆಲೋಚನೆ, ಮನಸ್ಸು, ಚಾರಿತ್ರ್ಯಗಳ ಬದ ಲಾವಣೆಯಾದರೆ ನಮ್ಮ ಬಗೆಗಿನ ಇತರರ ಮನೋಭಾವವೂ ಬದಲಾಗುತ್ತದೆ. ಇದು ಸಾಧಕನ ಜೀವನದ ಮೂಲಭೂತ ತತ್ತ್ವವಾಗಬೇಕು.

ಯೋಗರತ್ನಾಕರ ಗ್ರಂಥಕರ್ತ ಜೈನಕವಿ ಶಾಂತರಸ ಪತಂಜಲಿಯ ಯಮಾದಿ ಅಷ್ಟಾಂಗ ಯೋಗವನ್ನೇ ಮೂಲವಾಗಿ ಪರಿಗಣಿಸಿ ಜೈನ ಮತಾನುಸಾರ ‘ಯೋಗರತ್ನಾಕರ’ವನ್ನು ರಚಿಸಿರುವನು. ನೇಮಿಜಿನ, ಸಿದ್ಧಾದಿಗಳು ಮತ್ತು ಸರಸ್ವತಿಯನ್ನು ಪ್ರಾರ್ಥಿಸಿ ಶಾಂತರಸ ಯೋಗರತ್ನಾಕರವನ್ನು ಪ್ರಾರಂಭಿಸಿದ್ದಾನೆ. ಶಾಸ್ತ್ರ ವಿಷಯವನ್ನು ಶಾಂತರಸ ಸುಲಭವಾಗಿಯೂ ಸುಗಮವಾಗಿಯೂ ವಿವರಿಸಿದ್ದಾನೆ. ಇದನ್ನು ಅನುಸರಣೀಯವೆಂಬಂತೆ ವರ್ಣಿಸಿದ್ದಾನೆ.

ಯಮ: ಶಾಂತರಸನು ಯೋಗದ ಪ್ರಥಮಾಂಗವಾದ ಯಮದ ಕುರಿತು ವಿವರಣೆ ನೀಡಿರುವನು. ಶ್ರಾವಕನಾಗಲಿ, ಯತಿಯಾಗಲಿ ಮೂಲ ವ್ರತಲಕ್ಷಣದಿಂದ ಆತ್ಮತತ್ತ್ವವನ್ನು ನಡೆಸುವುದು ಯಮ. ಸಮತೆಯಲ್ಲಿ ನಡೆಯುವ ಮತಿ ಯಮಿ ಎಂದೆನಿಸುತ್ತದೆ. ಸಮಭಾವನೆಯೆಂದರೆ ದ್ವಾದಶಾನು ಪ್ರಶ್ನೆಗಳನ್ನು ಅರಿತು ನಡೆಸುವುದು. ಅದೇ ತತ್ತಾ್ವಭ್ಯಾಸ. ಕ್ಷಮೆಯಲ್ಲಿ ಯೋಗವು ಫಲಿಸುತ್ತದೆ. ಕ್ಷಮೆಯಿಂದ ಕೂಡಿದವನೆ ಯಮಿ. ಸಮತಾಭಾವದಿಂದ ಯೋಗಿಗೆ ಯೋಗವು ಸಮನಿಸುತ್ತದೆ. ಕ್ಷಮೆಯಿಲ್ಲದ ಮುನಿ ಭ್ರಮಿಸುತ್ತಾನೆ. ನೋಡದೆ, ನುಡಿಸದೆ, ಕೋಪಿಸದೆ, ಕಾಡದೆ, ಸಂಗ-ಪ್ರಸಂಗವಾಡದೆ, ಮುನಿಸನ್ನು ಮಾಡದೆ ಮುನಿಯಾದವನು ಸಮತೆಯಲ್ಲಿರಬೇಕು. ಆಗ ಯೋಗಿ ಸಂಯಮಿಯೆನಿಸುತ್ತಾನೆ. ಮುನಿಯಾದವು ಸುಖ-ದುಃಖ, ಸ್ನೇಹ-ದ್ವೇಷ, ಪುಣ್ಯ-ಪಾಪಗಳಲ್ಲಿ ಸಮನಾಗಿರಬೇಕು. ಶಾಂತನಾಗಿ ಯೋಗದ ಚಿಂತೆಯಲ್ಲಿರುವವ ಮುನಿಯನ್ನಾಗಿಸುತ್ತಾನೆ. ಕೊಲೆ, ಹುಸಿ, ಕಳವನ್ನು ತೊರೆದು ಕ್ಷಮೆ, ಬ್ರಹ್ಮಚರ್ಯ, ದಯೆ, ಅರ್ಜವ, ಶೌಚ, ವಿಹಾರ, ಕೆಲಚರ್ಯಗಳೆಂಬ ಹತ್ತು ವಿಧಗಳನ್ನು ಯಮಿಯಾದವನು ಆಚರಿಸಬೇಕು. ಭ್ರಾಂತಿಯಿಂದೇನು ಯಮ ಎನ್ನುವುದು ಸಂಯಮ. ಅದರ ಮೂಲದಯೆ, ದಯೆಯೇ ಧರ್ಮದ ಮೂಲ.

ನಿಯಮ: ನಿಯಮವನ್ನು ವಿವೇಚಿಸುತ್ತಾ ಪರಮಾಗಮದ ಇಚ್ಛೆಗನುಗುಣವಾಗಿ, ಗುರು ಹೇಳಿದ ರೀತಿಯಲ್ಲಿ ಸಂಯಮದಿಂದ ನಡೆದುಕೊಳ್ಳುವುದು ನಿಯಮ. ಯಮಸಹಿತನಾಗಿ ನಿಯಮ ಕ್ರಮದಿಂದ ಗುರು ಹೇಳಿದ ರೀತಿಯಲ್ಲಿ ಸಂಯಮಿ ನಡೆದರೆ ನಿಯಮ ಸಮನಿಸುತ್ತದೆ. ಜಿನಾಮಾರ್ಗ, ಆಪ್ರಾಗಮ ಮತ್ತು ಶುದ್ಧದರ್ಶನಗಳನ್ನು ತಿಳಿದು ನಡೆದರೆ ಸಯ್ಯಮಿಯಾಗುತ್ತಾನೆ. ಮುನಿಯಾದವನು ಸಕಲ ಗುಣಭರಿತನಾಗಿ ಸಕಲ-ನಿಷ್ಕಲಗಳನ್ನು ಅರಿತಿರಬೇಕು. ಪಂಚಾಸ್ತಿಕಾಯ, ಷಡ್ಡ ್ರ್ಯ, ಸಪ್ತತ್ತ್ವ, ಸವಪದಾರ್ಥಗಳನ್ನು ತಿಳಿದು ಚರಿತ್ರೆ, ಪುರಾಣ, ಕ್ರಮಭೇದ ರೀತಿ, ತತ್ವಾರ್ಥಗಳು ಮತ್ತು ವೀತರಾಗ ರಚಿತಾಗಮವನ್ನು ಅರಿಯಬೇಕು. ಹೇಯ-ಉಪಾದೇಯಗಳನ್ನು ತಿಳಿದು ಮೋಹವರ್ಜಿತನಾಗಿ ಪರಮಾಗಮವನ್ನು ಸ್ವೀಕರಿಸಿ ಕ್ರೋದಾದಿಗಳನ್ನು ಬಿಟ್ಟು ಮುಕ್ತಿ ನಿಲಯವನ್ನು ಹಿಡಿಯಬೇಕು. ಗುರೂಪದೇಶದಿಂದ ಪರಮಾಗಮವನ್ನು ನಡೆಸುವುದೆ ನಿಯಮ. ಹಿತವಾದುದನ್ನು ಚಿಂತಿಸಬೇಕು. ಯಮವನ್ನು ನಿಯಮಿಸಿದರೆ ಮನವೂ ನಿಯಮಿಸಲ್ಪಡುತ್ತದೆ ಎಂದಿರುವನು.

Latest Posts

ಲೈಫ್‌ಸ್ಟೈಲ್