ನಗದು ಪತ್ತೆ ಪ್ರಕರಣ: ವಿಶೇಷ ಪೀಠ ರಚಿಸುತ್ತೇವೆಂದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ! Yashwant Varma

Untitled design (6) (1)
Published on

Yashwant Varma: ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಿಂದ ಭಾರಿ ಪ್ರಮಾಣದ ನಗದು ವಶಪಡಿಸಿಕೊಂಡ ನಂತರ, ಅವರ ವಿರುದ್ಧ ಆರೋಪ ಹೊರಿಸಿದ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿಯ ಸಂಶೋಧನೆಗಳನ್ನು ಪ್ರಶ್ನಿಸಿ ವರ್ಮಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ವಿಶೇಷ ಪೀಠವನ್ನು ರಚಿಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಬುಧವಾರ (ಜುಲೈ 23) ತಿಳಿಸಿದ್ದಾರೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೊಂದಿಗೆ ಚರ್ಚಿಸಿದ ನಂತರ, ನಾನು ಈ ವಿಷಯವನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿ ಪ್ರಕರಣದಿಂದ ಗವಾಯಿ ಅವರು ಹಿಂದೆ ಸರಿದರು.

ನ್ಯಾಯಮೂರ್ತಿ ವರ್ಮಾ ಪರವಾಗಿ ಹಿರಿಯ ವಕೀಲರುಗಳಾದ ಕಪಿಲ್ ಸಿಬಲ್, ಮುಕುಲ್ ರೋಹಟಗಿ, ರಾಕೇಶ್ ದ್ವಿವೇದಿ, ಸಿದ್ಧಾರ್ಥ್ ಲುತ್ರಾ, ಸಿದ್ಧಾರ್ಥ್ ಅಗರ್ವಾಲ್, ಜಾರ್ಜ್ ಪೋಥನ್ ಪೂತಿಕೋಟೆ ಮತ್ತು ಮನೀಷಾ ಸಿಂಗ್ ವಾದ ಮಂಡಿಸಿದರು. ನಾವು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳ ಪರವಾಗಿ ಅರ್ಜಿ ಸಲ್ಲಿಸಿದ್ದೇವೆ. ಕೆಲವು ಸಾಂವಿಧಾನಿಕ ಸಮಸ್ಯೆಗಳು ಇದರಲ್ಲಿ ಅಡಗಿದ್ದು, ಸಾಧ್ಯವಾದಷ್ಟು ಬೇಗ ಪೀಠವನ್ನು ರಚಿಸುವಂತೆ ಕಪಿಲ್​ ಸಿಬಲ್ ವಿನಂತಿಸಿಕೊಂಡರು. ಈ ಹಿನ್ನೆಲೆಯಲ್ಲಿ ಪೀಠ ರಚನೆ ಮಾಡುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ.

ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿರುವಾಗ ನಗದು ಬಂಡಲ್‌ಗಳು ಪತ್ತೆಯಾಗಿದ್ದು, ತನಿಖೆಗೆ ಕಾರಣವಾಯಿತು. ಏಪ್ರಿಲ್‌ನಲ್ಲಿ ಅವರನ್ನು ನ್ಯಾಯಾಂಗಕ್ಕೆ ಸಂಬಂಧಪಟ್ಟ ಕೆಲಸಗಳಿಂದ ವಜಾಗೊಳಿಸಿ, ದೆಹಲಿ ಹೈಕೋರ್ಟ್​​ನಿಂದ, ಅಲಹಾಬಾದ್ ಹೈಕೋರ್ಟ್‌ಗೆ ಹಿಂತಿರುಗಿಸಲಾಯಿತು.

ಈ ವಿಷಯವಾಗಿ ನ್ಯಾಯಮೂರ್ತಿ ವರ್ಮಾ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಗೆ ಈ ವಾರದ ಆರಂಭದಲ್ಲಿ ಔಪಚಾರಿಕವಾಗಿ ಚಾಲನೆ ನೀಡಲಾಗಿದ್ದು, ಸೋಮವಾರ (ಜುಲೈ 21) ಲೋಕಸಭೆಯ 152 ಸಂಸತ್ ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಹಿ ಮಾಡಿದ ಜ್ಞಾಪಕ ಪತ್ರವನ್ನು ಸಲ್ಲಿಸಿ, ದುರ್ವರ್ತನೆ ಆರೋಪದ ಮೇಲೆ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿದರು.

ರಾಜ್ಯಸಭೆಯಲ್ಲಿ 50ಕ್ಕೂ ಹೆಚ್ಚು ರಾಜ್ಯಸಭಾ ಸದಸ್ಯರು ಸಹಿ ಮಾಡಿರುವ ನಿರ್ಣಯವನ್ನು ಸ್ವೀಕರಿಸಿರುವುದಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್​ ಅವರು ಮೇಲ್ಮನೆಯಲ್ಲಿ ದೃಢಪಡಿಸಿದರು. ಲೋಕಸಭೆಯಲ್ಲಿ ಸಲ್ಲಿಸಲಾದ ಸಮಾನಾಂತರ ನೋಟಿಸ್ ಅನ್ನು ಗಮನಿಸಿದ ಅವರು, ಮಹಾಭಿಯೋಗ ಪ್ರಕ್ರಿಯೆಯ ಮುಂದಿನ ಹಂತಗಳನ್ನು ಪ್ರಾರಂಭಿಸಲು ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.

ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ಸಲ್ಲಿಸಲಾದ ಈ ನಿರ್ಣಯಕ್ಕೆ ಬಿಜೆಪಿ, ಕಾಂಗ್ರೆಸ್, ಟಿಡಿಪಿ, ಜೆಡಿಯು, ಸಿಪಿಎಂ ಮತ್ತು ಇತರ ಸಂಸದರು ಪಕ್ಷಾತೀತವಾಗಿ ಬೆಂಬಲ ನೀಡಿದರು. ಅನುರಾಗ್ ಠಾಕೂರ್, ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ, ರಾಜೀವ್ ಪ್ರತಾಪ್ ರೂಡಿ, ಸುಪ್ರಿಯಾ ಸುಳೆ, ಕೆಸಿ ವೇಣುಗೋಪಾಲ್ ಮತ್ತು ಪಿಪಿ ಚೌಧರಿ ಸಹಿ ಹಾಕಿದ್ದಾರೆ.

ಈ ಪ್ರಕರಣದ ಕುರಿತು ಪರಿಶೀಲಿಸಲು ಎರಡೂ ಸದನಗಳು ಜಂಟಿಯಾಗಿ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಿವೆ ಎಂದು ಮೂಲಗಳು ತಿಳಿಸಿವೆ. ಸ್ಪೀಕರ್ ಓಂ ಬಿರ್ಲಾ ಶೀಘ್ರದಲ್ಲಿ ಸಮಿತಿ ರಚನೆಯನ್ನು ಘೋಷಿಸುವ ಸಾಧ್ಯತೆಯಿದೆ. ನ್ಯಾಯಾಧೀಶರ ವಿಚಾರಣಾ ಕಾಯ್ದೆಯ ಪ್ರಕಾರ, ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಪ್ರಮುಖ ನ್ಯಾಯಶಾಸ್ತ್ರಜ್ಞರು ಇರುತ್ತಾರೆ. ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಸಂಸತ್ತಿನ ಅಧಿವೇಶನದೊಳಗೆ ವರದಿಯನ್ನು ಸಲ್ಲಿಸುವ ಸಾಧ್ಯತೆಗಳಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net