ಬೆಂಗಳೂರು: ಬ್ಲಾಕ್‌ಬಸ್ಟರ್ ಕೆಜಿಎಫ್ ಸರಣಿಯ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಅವರ ಮುಂದಿನ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್'(Toxic) ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಸದ್ಯ ಚಿತ್ರೀಕರಣ ಹಂತದಲ್ಲಿದೆ. ಈ ಹಿಂದೆ ಟಾಕ್ಸಿಕ್ ಸಿನಿಮಾ 2025ರ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇದೀಗ ಚಿತ್ರ ಬಿಡುಗಡೆಯನ್ನು 1 ವರ್ಷ ಮುಂದೂಡಲ್ಪಟ್ಟಿದೆ. ಸಿನಿಮಾದ ಹೊಸ ಪೋಸ್ಟ್ರ್ ರಿಲೀಸ್ ಮಾಡಿರುವ ತಯಾರಕರು 2026 ಮಾರ್ಚ್ 19ರಂದು ಚಿತ್ರವು ಬಿಡುಗಡೆಯಾಗಲಿದೆ ಎಂದು ಶನಿವಾರ(ಮಾರ್ಚ್ 22) ತಿಳಿಸಿದ್ದಾರೆ.
‘ಟಾಕ್ಸಿಕ್’ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣವಾಗುತ್ತಿರುವ ಭಾರತದಲ್ಲಿ ಮೊದಲ ಚಿತ್ರವಾಗಿದೆ. ಚಿತ್ರವನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಹಲವಾರು ಇತರ ಭಾಷೆಗಳಲ್ಲಿ ಡಬ್ ಮಾಡಲಾಗುವುದು ಎಂದು ಹೇಳಲಾಗಿದೆ. 2024ರ ಆಗಸ್ಟ್‌ನಲ್ಲಿ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣ ತಯಾರಿ ಹಾಗೂ ಶೂಟಿಂಗ್ ದಿನಗಳು ಹೆಚ್ಚಾಗುತ್ತಿವೆ ಎಂದಿದೆ ಚಿತ್ರತಂಡ. ಇದು ಸಿನಿಮಾ ತಡವಾಗಿ ಬಿಡುಗಡೆಯಾಗಲು ಕಾರಣ ಎನ್ನಲಾಗಿದೆ.