ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶಿಕ್ಷಣ ವ್ಯವಸ್ಥೆ ಮತ್ತು ಪರಿಸರ ರಕ್ಷಣೆಯಲ್ಲಿ ಡಾ.ಯಶೋವರ್ಮರ ಸಾಧನೆ ಅಪಾರವಾದುದು. ಯಾವುದೇ ದೊಡ್ಡ ಕಾರ್ಯಕ್ರಮದ ಜವಾಬ್ದಾರಿ ನೀಡಿದರೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಅವರು ಪರಿಸರದ ಮೇಲೆ ಅಪಾರ ಕಾಳಜಿ ಇಟ್ಟಿದ್ದರು. ಯಶೋವನ ಮತ್ತು ಉಜಿರೆ ಮುಖ್ಯರಸ್ತೆಗಳಲ್ಲಿ ಬೆಳೆದಿರುವ ಹಸಿರು ಕ್ರಾಂತಿ ಅವರ ಕೊಡುಗೆಯಾಗಿದ್ದು ಯಾತ್ರಾರ್ಥಿಗಳು ಬಂದಾಗ ಉಜಿರೆ ಪರಿಸರವನ್ನು ವಿದೇಶದ ಸೌಂದರ್ಯಕ್ಕೆ ಹೋಲಿಸುತ್ತಾರೆ. ಇದರಿಂದ ಉಜಿರೆ ಹಸಿರುಕ್ರಾಂತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾಗಿದ್ದ ಡಾ.ಬಿ.ಯಶೋವರ್ಮ ಅವರ ಸ್ಮರಣಾರ್ಥ ಯಶೋವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಮಂಗಳೂರು ವಿ.ವಿ ಉಪಕುಲಪತಿ ಪಿ.ಎಲ್.ಧರ್ಮ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಸುರ್ಯ ಗುತ್ತು, ಸೋನಿಯಾ ಯಶೋವರ್ಮ, ಪೂರಣ್ ವರ್ಮ, ಉಜಿರೆ ಕಾಲೇಜು ಪ್ರಾಚಾರ್ಯ ಡಾ.ಕುಮಾರ ಹೆಗ್ಡೆ ಉಪಸ್ಥಿತರಿದ್ದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಯಶೋವನದಲ್ಲಿ ಇಂಡೋನೇಷ್ಯಾ ವಾಸ್ತುಶಿಲ್ಪ ಆಧಾರಿತ ಸ್ವರ್ಗದ ದ್ವಾರ ಮಾದರಿಯ ಗೋಪುರ ನಿರ್ಮಿಸಲಾಗಿದೆ. ಆ ಮೂಲಕ ಸ್ವರ್ಗಸದೃಶ ಪ್ರಕೃತಿಯ ಲೋಕಕ್ಕೆ ಎಲ್ಲರಿಗೂ ಸ್ವಾಗತ ಕೋರುವಂತೆ ಮಾಡಲಾಗಿದೆ.
ಏನಿದು ಯಶೋವನ?
1999ರಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯ ಮತ್ತು ಡಾ.ಬಿ.ಯಶೋವರ್ಮ ಅವರ ಮುತುವರ್ಜಿಯಿಂದ ಆರಂಭವಾದ ಅಪರೂಪದ ಸಸ್ಯಸೌರಭಗಳನ್ನು ರಕ್ಷಿಸುವ ಸಸ್ಯೋದ್ಯಾನವೇ ಈ ಯಶೋವನ. ಪಶ್ಚಿಮಘಟ್ಟಗಳ ಅಪರೂಪದ ಸಸ್ಯ ಸಂಕುಲಗಳನ್ನು ಸಂರಕ್ಷಿಸುವ ಮತ್ತು ಅವುಗಳ ತಳಿಗಳನ್ನು ದಾಖಲಿಸುವ ಸಲುವಾಗಿ ಉಜಿರೆಯ ಸಿದ್ಧವನ ಸಮೀಪದಲ್ಲಿ 8 ಎಕರೆ ಜಾಗದಲ್ಲಿ ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಆರ್ಬೋರೇಟಂ(ಸಸ್ಯೋದ್ಯಾನ) ಹೆಸರಿನಲ್ಲಿ ಈ ಸಂರಕ್ಷಣಾ ವನವನ್ನು ಸ್ಥಾಪಿಸಿತ್ತು. ನಂತರದ ದಿನಗಳಲ್ಲಿ ಡಾ.ಬಿ.ಯಶೋವರ್ಮ ಅವರ ನಿರಂತರ ಆರೈಕೆಯಲ್ಲಿ ಅಪರೂಪದ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಸಸ್ಯೋದ್ಯಾನವಾಗಿ ರೂಪುಗೊಂಡಿತ್ತು.
ಪ್ರಸ್ತುತ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಈ ಯಶೋವನ ಹಲವು ಔಷಧೀಯ, ತೋಟಗಾರಿಕಾ, ಕಾಡು ಹಣ್ಣುಗಳು ಹಾಗೂ ಪಶ್ಚಿಮಘಟ್ಟಗಳ ಸಸ್ಯ ಸಂಕುಲಗಳ ಅಪಾರ ಭಂಡಾರವನ್ನೇ ಹೊಂದಿದೆ. 2020ರಲ್ಲಿ ನಡೆಸಿದ ಗಣತಿಯ ಪ್ರಕಾರ ಪ್ರಸ್ತುತ ಇಲ್ಲಿ 1116 ಮರಗಳಿದ್ದು ಉಜಿರೆಯ ಹಸಿರು ಭಂಡಾರವಾಗಿ ಕಂಗೊಳಿಸುತ್ತಿದೆ. ಮಕ್ಕಳು ಆಟವಾಡಲು ವ್ಯವಸ್ಥೆ, ಗಿಡಗಳನ್ನು ಬೆಳೆಸಲು ಹಸಿರು ಮನೆ, ತೆರೆದ ವೇದಿಕೆ, ವಿಶ್ರಾಂತಿಗಾಗಿ ಕಲ್ಲು ಬೆಂಚುಗಳು, ತೂಗುವ ಉದ್ಯಾನ, 850 ಮೀಟರ್‌ಗಳಷ್ಟು ಉದ್ದದ ಪಾದಚಾರಿ ಮಾರ್ಗ ಮತ್ತು ಮಾರ್ಗದುದ್ದಕ್ಕೂ ಪರಿಸರ ಪ್ರೀತಿ ಮೂಡಿಸುವ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪರಿಸರ ಪರ ಕಾಳಜಿಗೆ ಉದಾಹರಣೆಯಾಗಿ ನಿಂತಿದೆ.
ಏನಿದರ ವಿಶೇಷತೆ?
ಪಶ್ಚಿಮಘಟ್ಟದಲ್ಲಿ ಲಭ್ಯವಿರುವ ಅಮೂಲ್ಯ ಸಸ್ಯ ಸಂಕುಲಗಳ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರದ ಕುರಿತು ಅರಿವು ಮೂಡಿಸಲು ಸಹಕಾರಿಯಾಗಬೇಕೆಂಬ ಕಾರಣಕ್ಕಾಗಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಕಾರ್ಯದರ್ಶಿಗಳಾಗಿದ್ದ ಡಾ.ಬಿ.ಯಶೋವರ್ಮ ಅವರ ಕನಸಿನಂತೆ ದಕ್ಷಿಣ ಕನ್ನಡ ಜಿಪಂ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಸಸ್ಯೋದ್ಯಾನ ಜನ್ಮ ತಳೆದಿತ್ತು. ಇಲ್ಲಿ ಇಂದು ಸುಮಾರು 500 ಕ್ಕೂ ಹೆಚ್ಚಿನ ಜಾತಿಯ ಸಸ್ಯ ಪ್ರಭೇದಗಳು ಇಲ್ಲಿ ಬೆಳೆದು ನಿಂತಿವೆ. ನೈಸರ್ಗಿಕ ಆವಾಸಸ್ಥಾನದ ಹೊರಗೆ(ಎಕ್ಸ್ ಸಿಟು ಕನ್ಸರ್ವೇಷನ್) ನಡೆಯುವ ಸಸ್ಯ ಜಾತಿಗಳ ಸಂರಕ್ಷಣೆಗೆ ಉದಾಹರಣೆ ಈ ಸಸ್ಯೋದ್ಯಾನ.
ಸಂರಕ್ಷಣೆಯ ಜತೆ ಜ್ಞಾನಾರ್ಜನೆ
ಈ ಸಸ್ಯೋದ್ಯಾನದಲ್ಲಿ ನಿರಂತರವಾದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು ಹಲವಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭಾಗವಾಗಿ ಇಲ್ಲಿನ ಸಸ್ಯಸೌರಭಗಳನ್ನು ಅಧ್ಯಯನ ಮಾಡುವ ಸಲುವಾಗಿ ಭೇಟಿ ನೀಡುತ್ತಾರೆ. ಜೀವಂತ ಮಾದರಿಗಳ ಮೂಲಕ ಪರಿಸರದ ಸೂಕ್ಷ್ಮತೆ ಅರಿಯುತ್ತಾರೆ. ಗ್ರೀನ್ ಹೌಸ್, ವಿವಿಧ ವರ್ಗೀಕರಣದಲ್ಲಿ ಬೆಳೆಸಿರುವ ಮರ-ಗಿಡಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ನಿರಂತರವಾಗಿ ಹಲವಾರು ತರಬೇತಿ ಕಾರ್ಯಕ್ರಮ ಇಲ್ಲಿ ಆಯೋಜಿಸಲಾಗುತ್ತದೆ.
ಪರಿಸರಕ್ಕೆ ಕೊಡುಗೆ
ಪ್ರಸ್ತುತ ಯಶೋವನದಲ್ಲಿರುವ ಸಾವಿರಕ್ಕೂ ಅಧಿಕ ಮರಗಳಿಂದ ಪರಿಸರಕ್ಕೆ ಬಹು ದೊಡ್ಡ ಕೊಡುಗ ಸಿಕ್ಕಿದೆ. ಇಲ್ಲಿರುವ ಮರಗಳ ಕಾರ್ಬನ್ ಸೀಕ್ವೇಸ್ಟ್ರೇಷನ್(ಇಂಗಾಲದ ಶೇಖರಣಾ ಪ್ರಮಾಣ) ಪ್ರಮಾಣ ಸುಮಾರು 8518 ಕಿಲೋಗಳಷ್ಟಿದೆ. ಅಷ್ಟೇ ಅಲ್ಲದೇ ವಿವಿಧ ಹಣ್ಣುಗಳು, ಗೆಡ್ಡೆ-ಗೆಣಸುಗಳು ಸೇರಿದಂತೆ ವನ್ಯಜೀವಿಗಳಿಗೆ ಬೇಕಾದ ಆಹಾರದ ತಾಣವಾಗಿಯೂ ಈ ಯಶೋವನ ಬಳಕೆಯಾಗುತ್ತಿದೆ. ಅತ್ಯಧಿಕ ಆಮ್ಲಜನಕ ಉತ್ಪತ್ತಿಗೆ ಪಾಲನ್ನು ನೀಡುತ್ತಾ, ತನ್ನ ಹಸಿರ ಸಿರಿಯ ಮೂಲಕ ಉಜಿರೆ ಗ್ರಾಮದ ಸೌಂದರ್ಯ ಹೆಚ್ಚಲೂ ಕಾರಣವಾಗಿದೆ. ಪರಿಸರ ಸಂರಕ್ಷಣೆಗೆ ನೀಡಿದ ಈ ಕಿರು ಕಾಣಿಕೆಯ ಮುಖಾಂತರವೇ ಜೈವಿಕ ವೈವಿಧ್ಯ ಸಂರಕ್ಷಣಾ ಕೇಂದ್ರವೆಂದು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ.
ಗಿಡಗಳ ವರ್ಗೀಕರಣ ಹೇಗೆ?
ಇಲ್ಲಿ ಲಭ್ಯವಿರುವ ಸಸ್ಯಗಳನ್ನು ಬೆಂಥಾಮ್ ಮತ್ತು ಹೂಕರ್ ವರ್ಗೀಕರಣ ವ್ಯವಸ್ಥೆ ಪ್ರಕಾರ ನೆಡಲಾಗಿದೆ. ಪಾಲಿಪೆಟಲೇ, ಗ್ಯಾಮೋಪೆಟಲೇ ಹಾಗೂ ಅಪೆಟಲೇ, ಅನಾವೃತ ಬೀಜ ಸಸ್ಯ ಹಾಗೂ ಏಕದಳ ಸಸ್ಯಗಳು ಎಂಬ ಗುಂಪುಗಳಲ್ಲಿ ವಿಂಗಡಿಸಿ ನೆಟ್ಟು ಬೆಳೆಸಲಾಗುತ್ತಿದೆ. ಕೇವಲ ವೈಜ್ಞಾನಿಕ ವರ್ಗೀಕರಣಕ್ಕಷ್ಟೇ ಸೀಮಿತವಾಗದೆ ಭಾರತೀಯ ಜೋತಿಷ್ಯ ಶಾಸ್ತ್ರ, ಜೈನ ಹಾಗೂ ಹಿಂದು ಧಾರ್ಮಿಕ ನಂಬಿಕೆಗಳು, ಸಾಹಿತ್ಯ ಹಾಗೂ ಸಸ್ಯಗಳ ಮೂಲಗುಣಗಳ ಆಧಾರದ ಮೇಲೆ ಕೂಡ ವಿವಿಧ ವನಗಳನ್ನು ಇಲ್ಲಿ ರಚಿಸಲಾಗಿದೆ.
ಪವಿತ್ರ ವನ
ಭಾರತೀಯ ಜೋತಿಷ್ಯ ಶಾಸ್ತ್ರವು ಸಸ್ಯಗಳೊಂದಿಗೂ ತಳುಕು ಹಾಕಿಕೊಂದಿರುವ ಕಾರಣ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ನವಗ್ರಹ ವನ, ದ್ವಾದಶ ರಾಶಿ ವನ, ನಕ್ಷತ್ರ ವನಗಳನ್ನು ಅವುಗಳಿಗೆ ಸಂಬಂಧಿಸಿದ ಸಸ್ಯಗಳೊಂದಿಗೆ ಸಮೀಕರಿಸಿ ಉಪ ವನಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಅಂಬಿಕಾ ವನ, ಸತ್ಯನಾರಾಯಣ ಪೂಜಾ ವನ, ಗಣೇಶ ವನ, ಶಿವ ಪಂಚಾಯತ ವನ, ವಿಷ್ಣುವನ ಹಾಗೂ ಶನಿವನಗಳನ್ನು ಕೂಡ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ನಿರ್ಮಿಸಲಾಗಿದೆ.
ತೀಥರ್ಂಕರ ವನ
ಜೈನ ಧಾರ್ಮಿಕ ನಂಬಿಕೆಗಳ ಪ್ರಕಾರ ಜೈನ ಧರ್ಮದ 24 ತೀಥರ್ಂಕರರು ಮೋಕ್ಷವನ್ನು ಪಡೆದ ಮರಗಳನ್ನು ಇಲ್ಲಿ ಒಂದೇ ಸ್ಥಳದಲ್ಲಿ ನೆಟ್ಟು ಪೋಷಿಸಲಾಗುತ್ತಿದೆ.
ಅಶೋಕ ವನ
ಸುಮಾರು 50 ಕ್ಕೂ ಅಧಿಕ ಸೀತಾ ಅಶೋಕ ವೃಕ್ಷಗಳನ್ನು ಇಲ್ಲಿ ಕಾಣಬಹುದಾಗಿದ್ದು, ಆರ್ಬೋರೇಟಮ್‌ಗೆ ಭೇಟಿ ನೀಡುವ ಜನರ ನೆಚ್ಚಿನ ವಿಶ್ರಾಂತಿಯ ಸ್ಥಳವಾಗಿದೆ.
ಪಂಪವನ ಹಾಗೂ ಕುವೆಂಪು ವನ
ಕನ್ನಡದ ಆದಿಕವಿ ಪಂಪ ಹಾಗೂ ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಸಸ್ಯ ಜಾತಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಆರ್ಬೋರೇಟಮ್ ನ ಹೃದಯ ಭಾಗದಲ್ಲಾಗಿದೆ.
ಔಷಧೀಯ ಸಸ್ಯಗಳು
ತೋಟಗಾರಿಕೆ ಸಸ್ಯಗಳ ವನ, ವಿವಿಧ ಔಷಧೀಯ ಸಸ್ಯಗಳನ್ನೊಳಗೊಂಡ ಮನೆ ಮದ್ದು ಗಿಡಗಳ ವನ, ದೇಶಿ ಮತ್ತು ವಿದೇಶಿ ಹಣ್ಣಿನ ಗಿಡಗಳ ವನ, ಆಮ್ಲಕಿ, ಹರೀತಕಿ ಹಾಗೂ ಬಿಭೀತಕಿ ವೃಕ್ಷಗಳನ್ನೊಳಗೊಂಡ ತ್ರಿಫಲ ವನ, ಸಪ್ತ ಪರ್ಣಿ ವೃಕ್ಷದ ಸಾಲುಮರಗಳನ್ನೊಳಗೊಂಡ ಸಪ್ತಪರ್ಣಿ ಮಾರ್ಗಗಳು ಇಲ್ಲಿವೆ.
ನಿರ್ವಹಣೆ
ಈ ಸಸ್ಯೋದ್ಯಾನದಲ್ಲಿ ಕಾಲ ಕಾಲಕ್ಕೆ ನಾಶವಾದ ಸಸ್ಯಗಳ ಪುನಃ ಸೇರ್ಪಡೆ(ನೆಡುವುದು) ಹಾಗೂ ಸಂಬಂಧಿಸಿದ ಗುಂಪಿಗೆ ಸೇರಿದ ಹೊಸ ಸಸ್ಯಗಳ ಸೇರ್ಪಡೆ ಕಾರ್ಯ ನಿರಂತರವಾಗಿ ನಡೆಯುತ್ತದೆ. ಸಸ್ಯಗಳ ಪೋಷಣೆಗೆ ಸಾವಯವ ಗೊಬ್ಬರ ಹಾಗೂ ವಿದ್ಯಾರ್ಥಿ ನಿಲಯಗಳ ಸಂಸ್ಕರಿತ ನೀರನ್ನು ಬಳಸಲಾಗುತ್ತಿದೆ. ಈ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಸಸ್ಯ ಶಾಸ್ತ್ರ ವಿಭಾಗ, ಕಾಲೇಜಿನ ತೋಟಗಾರಿಕೆ ವಿಭಾಗಗಳು ಶ್ರದ್ಧೆಯಿಂದ ಕೈ ಜೋಡಿಸಿವೆ.