ಕ್ಯಾರವಾನ್​ ಬಳಿ ಕೆಟ್ಟದಾಗಿ ನಡೆದುಕೊಂಡ ಯುವಕನಿಗೆ ಯಶಿಕಾ ಕೊಟ್ಟ ತಿರುಗೇಟು ಹೆಣ್ಣುಮಕ್ಕಳಿಗೆ ಪಾಠವಂತೆ!

Yashika
Published on

ಚೆನ್ನೈ: ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್, 2021ರ ಜುಲೈ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಮಾರು ಅರ್ಧ ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡು ಸಂಪೂರ್ಣ ಸಹಜ ಜೀವನಕ್ಕೆ ಮರಳಿದರು. ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್​ ಬದುಕಿ ಬಂದಿರುವ ಯಶಿಕಾ, ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್​ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ.

ಕಾಲಿನಿಂದ ಒದ್ದು ಕೆಡವಿದೆ

ಇದೀಗ ಸಂದರ್ಶನವೊಂದರಲ್ಲಿ ತನಗೆ 13ನೇ ವಯಸ್ಸಿನಲ್ಲಿ ಎದುರಾದ ಕಹಿ ಘಟನೆ ಒಂದನ್ನು ಬಹಿರಂಗಪಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾ ಒಂದಕ್ಕೆ ಒಂದು ನಿಮಿಷದ ದೃಶ್ಯಕ್ಕಾಗಿ ಶೂಟಿಂಗ್​ ಮಾಡುವಾಗ ಈ ಘಟನೆ ನಡೆಯಿತಂತೆ. ಯಶಿಕಾ ಕ್ಯಾರವಾನ್​ಗೆ ಹೋಗುವಾಗ ಯಾರೋ ಒಬ್ಬ ವ್ಯಕ್ತಿ ಹಿಂದಿನಿಂದ ಆಕೆಯ ನಿತಂಬವನ್ನು ದುರುದ್ದೇಶದಿಂದ, ಬೇಕಂತಲೇ ಸ್ಪರ್ಶಿಸಿದನಂತೆ. ಇದರಿಂದ ಆಘಾತ ಅಥವಾ ವಿಚಲಿತಳಾಗದೇ ಧೈರ್ಯದಿಂದ ಆ ಘಟನೆ ಎದುರಿಸಿದ್ದಾಗಿ ತಿಳಿಸಿದ್ದಾರೆ. ತನ್ನನ್ನು ಸ್ಪರ್ಶಿಸಿದ ವ್ಯಕ್ತಿಗೆ ತಿರುಗಿ ಕಾಲಿನಿಂದ ಒದ್ದು, ಕೆಳಗೆ ಕೆಡವಿದ್ದಾಗಿ ಹೇಳಿದ್ದಾರೆ.

ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ 

ಹೆಣ್ಣು ಮಕ್ಕಳಿಗೆ ಸಂದೇಶವೊಂದನ್ನು ರವಾನಿಸಿರುವ ಯಶಿಕಾ, ಇಂತಹ ಘಟನೆಗಳು ಎದುರಾದಾಗ ಹೆದರಬೇಡಿ. ನಿಮ್ಮೊಂದಿಗೆ ಯಾರಾದರೂ ಅನುಚಿತವಾಗಿ ನಡೆದುಕೊಂಡರೆ ಅಂಥವರಿಗೆ ತಕ್ಷಣ ಬಾರಿಸಿ. ತಪ್ಪು ಮಾಡಿರುವುದರಿಂದ ಅವರಿಂದ ಏನು ಮಾಡಲು ಆಗುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ ಎಂದು ಯಶಿಕಾ ಹೇಳಿದ್ದಾರೆ. ಯಶಿಕಾ ಅವರು ಕಹಿ ಘಟನೆ ಎದುರಿಸಿದ ರೀತಿ ಎಲ್ಲರಿಗೂ ಒಂದು ಪಾಠವಾಗಲಿದೆ.

ಯಶಿಕಾ ಸಿನಿ ಪಯಣ

ಅಂದಹಾಗೆ ಮನರಂಜನಾ ಉದ್ಯಮದಲ್ಲಿ ಯಶಿಕಾ ಆನಂದ್ ಅವರ ಪ್ರಯಾಣವು Instagram ಮಾಡೆಲ್ ಆಗಿ ಪ್ರಾರಂಭವಾಯಿತು. ಮುಂದೆ ಇದೇ ಅವರ ಸಿನಿಮಾ ವೃತ್ತಿಜೀವನಕ್ಕೂ ದಾರಿ ಮಾಡಿಕೊಟ್ಟಿತು. "ಕವಲೈ ವೆಂಡಮ್" (2016) ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು "ಧೂರುವಂಗಲ್ ಪಥಿನಾರು" (2016) ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ಜನಮನ್ನಣೆ ಗಳಿಸಿದರು. ಇದಾದ ಬಳಿಕ ವಯಸ್ಕರ ಕಾಮಿಡಿ ಸಿನಿಮಾ "ಇರುಟ್ಟು ಅರೈಯಿಲ್ ಮುರಟ್ಟು ಕುತ್ತು" (2018) ಸಿನಿಮಾದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು.

2021ರ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಘಟನೆ ಯಶಿಕಾ ಅವರ ಜೀವನದಲ್ಲಿ ಅತಿ ದೊಡ್ಡ ದುರಂತವಾಗಿಯೇ ಉಳಿದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net