

ಮುಂಬೈ: ಕ್ರಿಕೆಟಿಗನಾಗಬೇಕೆಂಬ ಮಹದಾಸೆಯಿಂದ ಉತ್ತರ ಪ್ರದೇಶದಿಂದ ಮುಂಬೈಗೆ ಬರಿಗೈಯಲ್ಲಿ ಓಡಿಹೋಗಿದ್ದ 12 ವರ್ಷದ ಬಾಲಕನೊಬ್ಬ ಈಗ ಟೀಮ್ ಇಂಡಿಯಾ ಪರ ಆಡಿ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. ಅದರ ಬೆನ್ನಲ್ಲೇ, ಮುಂಬೈನಲ್ಲಿ ಸ್ವಂತ ಮನೆಯನ್ನು ಹೊಂದುವ ಆತನ ಮತ್ತೊಂದು ಕನಸು ಕೂಡ ನನಸಾಗಿದೆ. ಅವಳಿ ಕನಸುಗಳನ್ನು ಜತೆಜತೆಯಲ್ಲೇ ನನಸಾಗಿಸಿಕೊಂಡ ಈ ಕ್ರಿಕೆಟಿಗನೇ ಯಶಸ್ವಿ ಜೈಸ್ವಾಲ್.
21 ವರ್ಷದ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರ ಪದಾರ್ಪಣೆಯ ಟೆಸ್ಟ್ನಲ್ಲೇ 171 ರನ್ ಸಿಡಿಸಿ ವೆಸ್ಟ್ ಇಂಡೀಸ್ನಲ್ಲಿ ವಿಜೃಂಭಿಸಿದ ನಡುವೆ ಅವರ ಕುಟುಂಬ ಮುಂಬೈನಲ್ಲಿ ಎರಡು ಬೆಡ್ರೂಂಗಳ ಬಾಡಿಗೆ ಫ್ಲ್ಯಾಟ್ನಿಂದ ಐದು ಬೆಡ್ರೂಂಗಳ ಹೊಸ ಸ್ವಂತ ಫ್ಲ್ಯಾಟ್ಗೆ ಸ್ಥಳಾಂತರಗೊಂಡಿದೆ. ಈ ಅವಳಿ ಸಂಭ್ರಮದ ಬಗ್ಗೆ ಜೈಸ್ವಾಲ್ ಸಹೋದರ ತೇಜಸ್ವಿ ಸಂತಸ ಹಂಚಿಕೊಂಡಿದ್ದಾರೆ. ಬಾಡಿಗೆ ಮನೆಯಿಂದ ಬೇಗನೆ ಸ್ವಂತ ಮನೆಗೆ ಸ್ಥಳಾಂತರಗೊಳ್ಳಬೇಕೆಂಬುದು ಜೈಸ್ವಾಲ್ ಆಸೆಯಾಗಿತ್ತು. ಅದರಂತೆ ಸ್ವಂತ ಮನೆಗೆ ಶಿಫ್ಟ್ ಆಗಿದ್ದೇವೆ. ಜೈಸ್ವಾಲ್ ಕುಟುಂಬ ಕಳೆದ 2 ವರ್ಷಗಳಿಂದ ಥಾಣೆಯ ಬಾಡಿಗೆ ಮನೆಯಲ್ಲಿತ್ತು.
ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಸಿಡಿಸಿದ 17ನೇ ಭಾರತೀಯ ಎನಿಸಿದ ಎಡಗೈ ಆರಂಭಿಕ ಯಶಸ್ವಿ, ಕ್ರಿಕೆಟಿಗನಾಗುವ ಕನಸಿನೊಂದಿಗೆ ಬಾಲ್ಯದಲ್ಲೇ ಮನೆಬಿಟ್ಟು ಮುಂಬೈಗೆ ಓಡಿ ಹೋದಾಗ ಆಜಾದ್ ಕ್ರಿಕೆಟ್ ಮೈದಾನದ ಪಕ್ಕದಲ್ಲೇ ಪಾನಿಪುರಿ ಮಾರುತ್ತ ಕೋಚ್ಗಳ ಸಂಪರ್ಕ ಸಾಧಿಸಿ ತರಬೇತಿ ಪಡೆದುಕೊಂಡಿದ್ದರು. 19 ವಯೋಮಿತಿ ಭಾರತ ತಂಡ, ದೇಶೀಯ ಕ್ರಿಕೆಟ್, ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಮಿಂಚಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠರಾದ ಜೈಸ್ವಾಲ್, "ಇದು ಆರಂಭ ಮಾತ್ರ. ಇನ್ನಷ್ಟು ಯಶಸ್ಸು ಮುಂದಿನ ದಿನಗಳಲ್ಲಿ ಗಳಿಸಬೇಕಿದೆ. ತಂಡಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡುವ ಹಂಬಲವಿದೆ' ಎಂದಿದ್ದಾರೆ.