

ಡೊಮಿನಿಕಾ: ಕ್ರಿಕೆಟ್ ಆಡುವ ಕನಸು ಹೊತ್ತು ಉತ್ತರ ಪ್ರದೇಶದಿಂದ ಮುಂಬೈಗೆ 10ನೇ ವಯಸ್ಸಿನಲ್ಲೇ ವಲಸೆ ಹೋಗಿದ್ದ ಯಶಸ್ವಿ ಜೈಸ್ವಾಲ್ ಈಗ ಟೀಮ್ ಇಂಡಿಯಾ ಪರ ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಮುಂಬೈಗೆ ವಲಸೆ ಹೋದ ಆರಂಭದ ದಿನಗಳಲ್ಲಿ ಹೊಟ್ಟೆಪಾಡಿಗಾಗಿ ಕ್ರಿಕೆಟ್ ಮೈದಾನದ ಬಳಿಯೇ ಪಾನಿಪುರಿ ಮಾರಾಟ ಮಾಡಿದ್ದ ಜೈಸ್ವಾಲ್ ಇಂದು ಸೆಂಚುರಿ ವೀರರಾಗಿದ್ದಾರೆ.
ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಬಾರಿಸಿ ಮಿಂಚಿದ 21 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ಬರೆದರು. ಚೊಚ್ಚಲ ಟೆಸ್ಟ್ನಲ್ಲಿ ಶತಕ ಸಿಡಿಸಿದ 17ನೇ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜೈಸ್ವಾಲ್, ಪದಾರ್ಪಣೆಯ ಟೆಸ್ಟ್ನಲ್ಲಿ 150 ಪ್ಲಸ್ ರನ್ ಗಳಿಸಿದ 3ನೇ ಭಾರತೀಯ ಎನಿಸಿದರು. ಅಲ್ಲದೆ ಚೊಚ್ಚಲ ಟೆಸ್ಟ್ನಲ್ಲಿ 3ನೇ ಗರಿಷ್ಠ ರನ್ ಸಾಧಕರಾಗಿದ್ದಾರೆ. ಶಿಖರ್ ಧವನ್ (187), ರೋಹಿತ್ ಶರ್ಮ (177) ಮೊದಲೆರಡು ಸ್ಥಾನದಲ್ಲಿದ್ದಾರೆ. ಪದಾರ್ಪಣೆಯ ಟೆಸ್ಟ್ನಲ್ಲಿ ಗರಿಷ್ಠ ಎಸೆತ (387) ಎದುರಿಸಿದ ಭಾರತೀಯರೆಂಬ ಸಾಧನೆಯೂ ಜೈಸ್ವಾಲ್ ಅವರದಾಗಿದೆ. ಮೊಹಮದ್ ಅಜರುದ್ದೀನ್ 322 ಎಸೆತ ಆಡಿದ್ದು ಹಿಂದಿನ ದಾಖಲೆ. ಅಲ್ಲದೆ, ಪದಾರ್ಪಣೆ ಟೆಸ್ಟ್ನಲ್ಲಿ 350 ಪ್ಲಸ್ ಎಸೆತ ಎದುರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಪದಾರ್ಪಣೆಯ ಟೆಸ್ಟ್ನಲ್ಲಿ ಶತಕ ಸಿಡಿಸಿದ 3ನೇ ಭಾರತೀಯ ಆರಂಭಿಕ ಎಂಬ ಹೆಗ್ಗಳಿಕೆಯೂ ಜೈಸ್ವಾಲ್ ಅವರದಾಗಿದೆ. ಧವನ್, ಪೃಥ್ವಿ ಷಾ ಮೊದಲಿಬ್ಬರು.
ಭರವಸೆಯ ಎಡಗೈ ಬ್ಯಾಟ್ಸ್ಮನ್ ಆಗಿರುವ ಜೈಸ್ವಾಲ್, ಬಾಲ್ಯದಲ್ಲಿ ತಾನಿದ್ದ ಹಳ್ಳಿಯಲ್ಲಿ ಸೂಕ್ತ ಅವಕಾಶ ಸಿಗುವುದಿಲ್ಲ ಮತ್ತು ಕ್ರಿಕೆಟ್ ತಾರೆಯಾಗಬೇಕಿದ್ದರೆ ಮುಂಬೈಗೆ ಹೋಗಬೇಕು ಎಂಬ ಸಹಪಾಠಿಗಳ ಮಾತು ಕೇಳಿ, ಮನೆಬಿಟ್ಟು ಬರಿಗೈಯಲ್ಲೇ ಮುಂಬೈಗೆ ಓಡಿ ಹೋಗಿದ್ದರು. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಕ್ರಿಕೆಟ್ ಮೈದಾನದ ಬಳಿಯೇ ಪಾನಿಪುರಿ ಮಾರಬೇಕಾಗಿ ಬಂದಿತು. ಇದರಿಂದ ಧೃತಿಗೆಡದ ಯಶಸ್ವಿ ಪ್ರತಿಷ್ಠಿತ ಆಜಾದ್ ಮೈದಾನದಲ್ಲೇ ಗ್ರೌಂಡ್ಮನ್ಗಳು ಕಟ್ಟಿದ ಟೆಂಟ್ನಲ್ಲೇ ಉಳಿದುಕೊಂಡಿದ್ದರು. ದಿಗ್ಗಜ ಸಚಿನ್ ತೆಂಡುಲ್ಕರ್ ಆಡಿ ಬೆಳೆದ ಈ ಮೈದಾನ ಯಶಸ್ವಿಯ ಕೈಯನ್ನೂ ಹಿಡಿದೆತ್ತಿತು.
3 ತಿಂಗಳ ಕಾಲ ಟೆಂಟ್ನಲ್ಲೇ ಬದುಕಿದ ಬಳಿಕ 2013ರಲ್ಲಿ ಸಂತಕ್ರೋಜ್ನ ಕ್ರಿಕೆಟ್ ಅಕಾಡೆಮಿಯೊಂದರ ಕೋಚ್ ಜ್ವಾಲಾ ಸಿಂಗ್ ಕಣ್ಣಿಗೆ ಬಿದ್ದ ಯಶಸ್ವಿಗೆ ಅವರೇ ಸೂಕ್ತ ಆಶ್ರಯ ಒದಗಿಸಿದರು. ಮೊದಲಿಗೆ ಮುಂಬೈನ 16 ವಯೋಮಿತಿ ತಂಡದಲ್ಲಿ ಸ್ಥಾನ ಸಂಪಾದಿಸಿದ ಯಶಸ್ವಿ ಬಳಿಕ 19 ವಯೋಮಿತಿ ಭಾರತ ತಂಡದ ಪರ ಆಡಿದರು. 2018ರಲ್ಲಿ ನಡೆದ 19 ವಯೋಮಿತಿ ವಿಶ್ವಕಪ್ನಲ್ಲಿ ಸರ್ವಾಧಿಕ ಸಿಡಿಸಿದ ಸಾಧನೆ ಮಾಡಿದ ಯಶಸ್ವಿ, ಪಾಕಿಸ್ತಾನ ವಿರುದ್ಧದ ಸೆಮಿೈನಲ್ನಲ್ಲಿ ಶತಕವನ್ನೂ ಸಿಡಿಸಿ ಮಿಂಚಿದ್ದರು. ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ದೇಶೀಯ ಕ್ರಿಕೆಟ್ನಲ್ಲೂ ಯಶಸ್ವಿ ಆರಂಭ ಕಂಡ ಅವರು, ಲಿಸ್ಟ್ ಎ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಕಿರಿಯ ಕ್ರಿಕೆಟಿಗರೆನಿಸಿದ್ದಾರೆ.
ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ರನ್ ಪ್ರವಾಹ ಹರಿಸಿರುವ ಜೈಸ್ವಾಲ್, ಐಪಿಎಲ್ ಟೂರ್ನಿ ವೇಳೆ ಹಿರಿಯ ಕ್ರಿಕೆಟಿಗ ಎಂಎಸ್ ಧೋನಿಗೆ ನಮಸ್ತೇ ಮಾಡಿದ ಚಿತ್ರವೊಂದು ಈ ಹಿಂದೆ ವೈರಲ್ ಆಗಿತ್ತು. 21 ವರ್ಷ, 196 ದಿನ ವಯಸ್ಸಿನ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಟೆಸ್ಟ್ನಲ್ಲಿ ಶತಕ ಸಿಡಿಸಿದ 4ನೇ ಕಿರಿಯ ಭಾರತೀಯ ಬ್ಯಾಟರ್ ಎನಿಸಿದ್ದಾರೆ. ಪೃಥ್ವಿ ಷಾ (18 ವರ್ಷ, 329 ದಿನ), ಅಬ್ಬಾಸ್ ಅಲಿ (20 ವರ್ಷ, 126 ದಿನ), ಜಿಆರ್ ವಿಶ್ವನಾಥ್ (20 ವರ್ಷ, 276 ದಿನ) ಮೊದಲ ಮೂವರು ಸಾಧಕರು. ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ 150 ಪ್ಲಸ್ ರನ್ ಗಳಿಸಿದ 2ನೇ ಕಿರಿಯ ಭಾರತೀಯ ಬ್ಯಾಟರ್ ಎನಿಸಿದ್ದಾರೆ. ಮಾಧವ್ ಆಪ್ಟೆ (20 ವರ್ಷ, 137 ದಿನ) ಅತಿ ಕಿರಿಯರಾಗಿದ್ದಾರೆ.