ಭಾರತ-ವಿಂಡೀಸ್​ ಕ್ರಿಕೆಟ್​ ಸರಣಿಯನ್ನು ಯಾವ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು ಗೊತ್ತೇ?

ind vs wi jio web
Published on

ಮುಂಬೈ: ಮುಂಬರುವ ಭಾರತ ತಂಡದ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ತಿಂಗಳ ಕಾಲ ನಡೆಯಲಿರುವ ಎರಡು ಟೆಸ್ಟ್​, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯ ನೇರಪ್ರಸಾರದ ಡಿಜಿಟಲ್​ ಹಕ್ಕುಗಳನ್ನು ಜಿಯೋಸಿನಿಮಾ ಸ್ವಾಧೀನಪಡಿಸಿಕೊಂಡಿದೆ. ಇನ್ನು ಟಿವಿ ಚಾನಲ್​ಗಳ ಪೈಕಿ ದೂರದರ್ಶನ ನೆಟ್​ವರ್ಕ್​ನ ಡಿಡಿ ಸ್ಪೋರ್ಟ್ಸ್​​ ಚಾನಲ್​ನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಆದರೆ ಬೇರಾವುದೇ ಕೇಬಲ್​ ಚಾನಲ್​ಗಳಲ್ಲಿ ಪಂದ್ಯಗಳ ನೇರಪ್ರಸಾರ ಲಭ್ಯವಿರುವುದಿಲ್ಲ.

ಟಾಟಾ ಐಪಿಎಲ್​-2023ರಲ್ಲಿ ಹೊಸ ದಾಖಲೆ ಬರೆದ ಬಳಿಕ ಜಿಯೋಸಿನಿಮಾ ಆ್ಯಪ್​ ಈಗ ಕ್ರಿಕೆಟ್​ ಪ್ರೇಮಿಗಳಿಗೆ ಕೆರಿಬಿಯನ್​ನಲ್ಲಿ ನಡೆಯಲಿರುವ ಭಾರತ-ವೆಸ್ಟ್​ ಇಂಡೀಸ್​ ನಡುವಿನ ಎಲ್ಲ ಮೂರು ಪ್ರಕಾರದ ಕ್ರಿಕೆಟ್​ ಸರಣಿಗಳ ರೋಚಕ ಮನರಂಜನೆಯನ್ನು ಉಚಿತವಾಗಿ ಒದಗಿಸಲಿದೆ. ವೀಕ್ಷಕರು ಕನ್ನಡ, ಇಂಗ್ಲಿಷ್, ಹಿಂದಿ, ಭೋಜ್‌ಪುರಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳ ವೀಕ್ಷಕವಿವರಣೆಯೊಂದಿಗೆ ಸೀಮಿತ ಓವರ್‌ಗಳ ಕ್ರಿಕೆಟ್​ ಸರಣಿಯನ್ನು ವೀಕ್ಷಿಸಬಹುದಾಗಿದೆ. ದ್ವಿಪಕ್ಷೀಯ ಸರಣಿಯೊಂದನ್ನು ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇನ್ನು ಕ್ರಿಕೆಟ್​ ಪ್ರೇಮಿಗಳು ಒಟ್ಟಾರೆ ಸರಣಿ ಅಥವಾ ಪ್ರತಿ ಪಂದ್ಯದ ಲೆಕ್ಕಾಚಾರದಲ್ಲಿ ಹಣ ಪಾವತಿಸಿ ಫ್ಯಾನ್​ಕೋಡ್​ ಆ್ಯಪ್​ನಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಎಲ್ಲ ಮೂರು ಪ್ರಕಾರದ ಕ್ರಿಕೆಟ್​ ಸರಣಿಗಳನ್ನು ಒಳಗೊಂಡ ದ್ವಿಪಕ್ಷೀಯ ಪ್ರವಾಸ, ಜುಲೈ 12ರಿಂದ ಡೊಮಿನಿಕಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. ಬಳಿಕ ಟ್ರಿನಿಡಾಡ್​ನಲ್ಲಿ ಎರಡನೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಟೆಸ್ಟ್​ ಸರಣಿಯ ಮೂಲಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ 2023-25ರ ಆವೃತ್ತಿಯಲ್ಲೂ ಅಭಿಯಾನ ಆರಂಭಿಸಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 27ರಂದು ಆರಂಭಗೊಳ್ಳಲಿದೆ. ಬಾರ್ಬಡೋಸ್​ ಮತ್ತು ಟ್ರಿನಿಡಾಡ್​ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ. ಐದು ಪಂದ್ಯಗಳ ಟಿ20 ಸರಣಿಯು ಆಗಸ್ಟ್​ 3ರಂದು ಟ್ರಿನಿಡಾಡ್​ನಲ್ಲಿ ಶುರುವಾಗಲಿದೆ. 2, 3ನೇ ಪಂದ್ಯಗಳು ಗಯಾನದಲ್ಲಿ ನಡೆದರೆ, ಕೊನೇ 2 ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿವೆ.

ಟಾಟಾ ಐಪಿಎಲ್​ 2023ರ ಸಮಯದಲ್ಲಿ ಅಭೂತಪೂರ್ವ ಮಟ್ಟದ ನಿಶ್ಚಯ, ವೀಕ್ಷಣೆ ಮತ್ತು ಏಕಕಾಲಿಕತೆಯನ್ನು ಸ್ಥಾಪಿಸಿದ ಹಾಗೂ ಎಲ್ಲಾ ದಾಖಲೆಗಳನ್ನು ಛಿದ್ರಗೊಳಿಸಿದ ನಂತರ ನಂತರ ಜಿಯೋಸಿನಿಮ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕ್ರೀಡೆಯನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಉಚಿತವಾಗಿ ಪ್ರಸ್ತುತಿ ಪಡಿಸುವುದನ್ನು ಮುಂದುವರಿಸಲಿದೆ. 'ಜಿಯೋಸಿನಿಮಾದ ತಡೆರಹಿತ ಸ್ಟ್ರೀಮಿಂಗ್ ಅನುಭವದಿಂದಾಗಿ, ಹಿಂದೆಂದಿಗೂ ಕೇಳರಿಯದ ಬೆರಗುಗೊಳಿಸುವಂಥ ಮಾನದಂಡ ನಿರ್ಮಾಣವಾಯಿತು. ಕ್ರೀಡೆಯು ಡಿಜಿಟಲ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆಯುವಂತಾಗಲು ನಾವು ತಾಂತ್ರಿಕ ಸಾಮರ್ಥ್ಯದ ಗಡಿಗಳನ್ನು ದೂರ ತಳ್ಳಿದೆವು. ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ- 2023ರೊಂದಿಗೆ ನಾವು ಮುಂದೆ ಸಾಗುತ್ತಿದ್ದೇವೆ ಮತ್ತು ನಮ್ಮ ವೀಕ್ಷಕರಿಗೆ ವಿಶ್ವ ದರ್ಜೆಯ ಪ್ರಸ್ತುತಿಯನ್ನು ನೀಡುತ್ತೇವೆ' ಎಂದು ವಯಾಕಾಮ್​18ನ ಸ್ಟ್ರಾಟಜಿ, ಪಾಲುದಾರಿಕೆ ಮತ್ತು ಸ್ವಾಧೀನಗಳ ಕ್ರೀಡಾ ಮುಖ್ಯಸ್ಥ ಹರ್ಷ್ ಶ್ರೀವಾಸ್ತವ ಹೇಳಿದ್ದಾರೆ.

ಭಾರತ ತಂಡದ ವೆಸ್ಟ್​​ ಇಂಡೀಸ್​ ಪ್ರವಾಸ ವೇಳಾಪಟ್ಟಿ

ದಿನಾಂಕ ಪಂದ್ಯ ಆರಂಭ ಸ್ಥಳ

ಜುಲೈ 12-16 ಮೊದಲ ಟೆಸ್ಟ್​ ರಾತ್ರಿ 7.30 ವಿಂಡ್ಸರ್​ ಪಾರ್ಕ್​, ಡೊಮಿನಿಕಾ

ಜುಲೈ 20-24 2ನೇ ಟೆಸ್ಟ್​​ ರಾತ್ರಿ 7.30 ಕ್ವೀನ್ಸ್​​ ಪಾರ್ಕ್​ ಓವಲ್​, ಟ್ರಿನಿಡಾಡ್​

ಜುಲೈ 27 ಮೊದಲ ಏಕದಿನ ರಾತ್ರಿ 7.00 ಕೆನ್ಸಿಂಗ್​ಟನ್​ ಓವಲ್​, ಬಾರ್ಬಡೋಸ್​

ಜುಲೈ 29 2ನೇ ಏಕದಿನ ರಾತ್ರಿ 7.00 ಕೆನ್ಸಿಂಗ್​ಟನ್​ ಓವಲ್​, ಬಾರ್ಬಡೋಸ್​

ಆಗಸ್ಟ್​ 1 3ನೇ ಏಕದಿನ ರಾತ್ರಿ 7.00 ಬ್ರಿಯಾನ್​ ಲಾರಾ ಕ್ರಿಕೆಟ್​ ಅಕಾಡೆಮಿ, ಟ್ರಿನಿಡಾಡ್​

ಆಗಸ್ಟ್​ 3 ಮೊದಲ ಟಿ20 ರಾತ್ರಿ 8.00 ಬ್ರಿಯಾನ್​ ಲಾರಾ ಕ್ರಿಕೆಟ್​ ಅಕಾಡೆಮಿ, ಟ್ರಿನಿಡಾಡ್​

ಆಗಸ್ಟ್​ 6 2ನೇ ಟಿ20 ರಾತ್ರಿ 8.00 ನ್ಯಾಷನಲ್​ ಸ್ಟೇಡಿಯಂ, ಗಯಾನ

ಆಗಸ್ಟ್​ 8 3ನೇ ಟಿ20 ರಾತ್ರಿ 8.00 ನ್ಯಾಷನಲ್​ ಸ್ಟೇಡಿಯಂ, ಗಯಾನ

ಆಗಸ್ಟ್​ 12 4ನೇ ಟಿ20 ರಾತ್ರಿ 8.00 ಬ್ರೋವರ್ಡ್​ ಕೌಂಟಿ ಸ್ಟೇಡಿಯಂ, ಫ್ಲೋರಿಡಾ

ಆಗಸ್ಟ್​ 13 5ನೇ ಟಿ20 ರಾತ್ರಿ 8.00 ಬ್ರೋವರ್ಡ್​ ಕೌಂಟಿ ಸ್ಟೇಡಿಯಂ, ಫ್ಲೋರಿಡಾ

*ಸಮಯ: ಭಾರತೀಯ ಕಾಲಮಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net