

ಮುಂಬೈ: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯಿಸಲಿರುವ 'ಬ್ರಹ್ಮಾಸ್ತ್ರ'ದ ಮುಂದುವರೆದ ಭಾಗದಲ್ಲಿ ದೇವ್ ಎನ್ನುವ ಪಾತ್ರದಲ್ಲಿ ಯಶ್ ನಟಿಸುವ ಸಾಧ್ಯತೆ ಇದೆ, ಈಗಾಗಲೇ ಚಿತ್ರತಂಡದವರು ಅವರನ್ನು ಸಂಪರ್ಕಿಸಿದ್ದಾಗಿದೆ ಎಂಬ ಸುದ್ದಿ ಬಂದಿತ್ತು. ಅದರ ಹಿಂದೆಯೇ, ಚಿತ್ರದ ನಿರ್ಮಾಪಕ ಕರಣ್ ಜೋಹರ್ ಇವೆಲ್ಲವೂ ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದರು. ಯಶ್ ಅವರನ್ನು ದೇವ್ ಪಾತ್ರಕ್ಕಾಗಿ ಸಂಪರ್ಕಿಸಿಯೇ ಇಲ್ಲ ಎಂದು ಸಂದರ್ಶನವೊಂದರಲ್ಲಿ ನುಡಿದಿದ್ದರು.
ಆದರೆ, ನಿಜವೇನೆಂದರೆ ಕರಣ್ ಜೋಹರ್ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಇಬ್ಬರೂ ಎರಡು ಬಾರಿ ಯಶ್ ಅವರನ್ನು ಭೇಟಿ ಮಾಡಿ ಚಿತ್ರದಲ್ಲಿ ನಟಿಸುವುದಕ್ಕೆ ಮನವೊಲಿಸಲು ಪ್ರಯತ್ನಿಸಿದರಂತೆ. ಆದರೆ, ಯಶ್ ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ.
'ಬ್ರಹ್ಮಾಸ್ತ್ರ 2' ಚಿತ್ರದಲ್ಲಿ ದೇವ್ ಪಾತ್ರವನ್ನು ಯಶ್ ಒಪ್ಪದಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಯಶ್ ಈ ಹಿಂದೆ 'ಕೆಜಿಎಫ್' ಫ್ರಾಂಚೈಸಿಯಲ್ಲಿ ನಟಿಸಿದವರು. 'ಬ್ರಹ್ಮಾಸ್ತ್ರ' ಎನ್ನುವುದು ರಣಬೀರ್ ಕಪೂರ್ ಅಭಿನಯದ ಚಿತ್ರಗಳ ಫ್ರಾಂಚೈಸಿ. ತಮ್ಮದೇ ಒಂದು ಫ್ರಾಂಚೈಸಿ ಜನಪ್ರಿಯವಾಗಿರುವಾಗ, ಇನ್ನೊಬ್ಬರ ಫ್ರಾಂಚೈಸಿಯಲ್ಲಿ ಯಾಕೆ ನಟಿಸಬೇಕು ಎನ್ನುವುದು ಒಂದು ಪ್ರಶ್ನೆಯಾದರೆ, 'ಕೆಜಿಎಫ್ 2'ದಂತ ಚಿತ್ರದಲ್ಲಿ ನಟಿಸಿದ ಮೇಲೆ ಅದಕ್ಕಿಂತ ದೊಡ್ಡದೇನೋ ಮಾಡುವ ಬಯಕೆ ಅವರದ್ದು. ಅದೇ ಕಾರಣಕ್ಕಾಗಿ ಅವರು 'ಬ್ರಹ್ಮಾಸ್ತ್ರ 2' ಚಿತ್ರವನ್ನು ಒಪ್ಪಿಕೊಂಡಿಲ್ಲ.
ದೇವ್ ಪಾತ್ರವನ್ನು ತಿರಸ್ಕರಿಸಿರುವುದು ಯಶ್ ಒಬ್ಬರೇ ಅಲ್ಲ. ಇದಕ್ಕೂ ಮುನ್ನ ರಣವೀರ್ ಸಿಂಗ್ ಮತ್ತು ಹೃತಿಕ್ ರೋಶನ್ ಅವರಿಗೆ ಈ ಪಾತ್ರವನ್ನು ನೀಡಲಾಗಿತ್ತಂತೆ ಮತ್ತು ಅವರು ಈ ಪಾತ್ರಕ್ಕೆ ನೋ ಎಂದಿದ್ದರಂತೆ. ಈಗ ಯಶ್ ಸಹ ಬೇಡ ಎನ್ನುವ ಮೂಲಕ ಒಟ್ಟು ಮೂವರು ಜನಪ್ರಿಯ ನಟರು ಒಂದೇ ಪಾತ್ರವನ್ನು ರಿಜೆಕ್ಟ್ ಮಾಡಿದಂತಾಗಿದೆ.
ಯಶ್ ಬೇಡ ಎಂದಿರುವ ಹಿನ್ನೆಲೆಯಲ್ಲಿ, ದೇವ್ ಪಾತ್ರವನ್ನು ಯಾರು ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ರಣವೀರ್, ಹೃತಿಕ್ ಮತ್ತು ಯಶ್ ಬಿಟ್ಟ ಪಾತ್ರವನ್ನು ಯಾರು ಮಾಡಬಹುದು? ಕಾದು ನೋಡಿ ...