65 ಕೋಟಿ ರೂ. ಕೊಟ್ಟು ಡ್ಯೂಪ್ಲೆ ಬಂಗ್ಲೆ ಖರೀದಿಸಿದರಂತೆ ಜಾಹ್ನವಿ ಕಪೂರ್​!

Jahnavi Kapoor 3
Published on

ಮುಂಬೈ: ಬಾಲಿವುಡ್​ನಲ್ಲಿ ಸೆಲೆಬ್ರಿಟಿಗಳು ಜಿದ್ದಿಗೆ ಬಿದ್ದವರಂತೆ ಪ್ರಾಪರ್ಟಿಗಳನ್ನು ಖರೀದಿಸುತ್ತಿದ್ದಾರೆ. ಯಾರು ನೋಡಿದರೂ ಕೋಟ್ಯಂತರ ಬೆಲೆ ಬಾಳುವ ಮನೆಗಳನ್ನು, ಫ್ಲಾಟ್​ಗಳನ್ನು ಮತ್ತು ವಿಲ್ಲಗಳನ್ನು ಖರೀದಿಸುವುದರಲ್ಲಿ ಬಿಜಿಯಾಗಿದ್ದಾರೆ. ಈಗ ಆ ಸಾಲಿಗೆ ಬಾಲಿವುಡ್​ ನಟಿ ಮತ್ತು ಶ್ರೀದೇವಿ-ಬೋನಿ ಕಪೂರ್​ ಮಗಳು ಜಾಹ್ನವಿ ಕಪೂರ್​ ಸಹ ಸೇರಿದ್ದಾರೆ.

ಜಾಹ್ನವಿ ಕಪೂರ್​ ಅಭಿನಯದ ಹೊಸ ಚಿತ್ರ 'ಮಿಲಿ', ಶುಕ್ರವಾರವಷ್ಟೇ ಎಲ್ಲೆಡೆ ಬಿಡುಗಡೆಯಾಗಿದೆ. ಈ ಚಿತ್ರವು ಸದ್ದು ಮಾಡುತ್ತಿರುವುದಕ್ಕಿಂತ ಹೆಚ್ಚಾಗಿ, ಜಾಹ್ನವಿ ಮನೆ ಖರೀದಿಸಿರುವ ಸುದ್ದಿ ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಈ ಮನೆಯ ಬೆಲೆ. ಬರೋಬ್ಬರಿ 65 ಕೋಟಿ ರೂ. ಬೆಲೆ ಬಾಳುವ ಮನೆಯಂತೆ ಇದು. ಜಾಹ್ನವಿ ಮಾಡಿರುವುದು ನಾಲ್ಕೇ ಚಿತ್ರಗಳು. ಇಷ್ಟು ಕಡಿಮೆ ಸಮಯದಲ್ಲಿ ಅಷ್ಟು ಬೆಲೆಬಾಳುವ ಮನೆ ಖರೀದಿಸಿದ್ದಾರೆ ಎಂದರೆ, ಆಕೆಯ ಸಂಭಾವನೆ ಎಷ್ಟಿರಬಹುದು? ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

ಅಂದಹಾಗೆ, ಜಾಹ್ನವಿ ಖರೀದಿಸಿರುವ ಮನೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿದೆ. ಪಾಲಿ ಹಿಲ್​ನಲ್ಲಿರುವ ಕುಬೆಲೆಸ್ಕ್​ ಬಿಲ್ಡಿಂಗ್​ನ ಮೊದಲ ಮತ್ತು ಎರಡನೆಯ ಮಹಡಿಗಳಲ್ಲಿರುವ ಮನೆಗಳನ್ನು ಜಾಹ್ನವಿ ಖರೀದಿಸಿದ್ದಾರಂತೆ. 8,669 ಚದರಡಿ ಇರುವ ಈ ಪ್ರಾಪರ್ಟಿಯನ್ನು ಅ.12ರಂದು ರಿಜಿಸ್ಟರ್​ ಮಾಡಿಸಲಾಗಿದೆ. ರಿಜಿಸ್ಟ್ರೇಶನ್​ಗೆಂದೇ ಜಾಹ್ನವಿ 3.90 ಕೋಟಿ ರೂ. ಕಟ್ಟಿದ್ದಾರೆ ಎಂದರೆ ಲೆಕ್ಕ ಹಾಕಿ.

ಜಾಹ್ನವಿಗೆ ಇಷ್ಟು ದುಡ್ಡು ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಇದಕ್ಕೂ ಮೊದಲು ಈ ವರ್ಷದ ಜುಲೈನಲ್ಲಿ ಜಾಹ್ನವಿ ಅದೇ ಜುಹುವಿನಲ್ಲಿರುವ ತಮ್ಮ ಮನೆಯನ್ನು ರಾಜಕುಮಾರ್​ ರಾವ್​ಗೆ 44 ಕೋಟಿ ರೂ. ಮಾರಿದ್ದರು. ಆ ಮಾರಾಟದಿಂದ ಬಂದ ಹಣಕ್ಕೆ ಇನ್ನಷ್ಟು ಹಣ ಸೇರಿಸಿ ಅವರು ಈ ಹೊಸ ಮನೆಯನ್ನು ಖರೀದಿಸಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net