

ಬೆಂಗಳೂರು: ದಿಗಂತ್ ಅಭಿನಯದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಕೆಲವು ದಿನಗಳ ಹಿಂದಷ್ಟೇ ನಿಧಿ ಸುಬ್ಬಯ್ಯ ಸೇರ್ಪಡೆಯಾಗಿದ್ದರು. ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ 'ರಂಗಿತರಂಗ' ಖ್ಯಾತಿಯ ರಾಧಿಕಾ ನಾರಾಯಣ್ ಸಹ ಈ ಚಿತ್ರತಂಡಕ್ಕೆ ಬಲಗಾಲಿಟ್ಟು ಎಂಟ್ರಿ ಕೊಟ್ಟಿದ್ದಾರೆ.
‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಿ ಇದೀಗ ಮುಗಿಯುವ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ರಾಧಿಕಾ ನಾರಾಯಣ್ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ರಾಧಿಕಾ ಪಾತ್ರವೇನು? ಅವರು ಇಲ್ಲಿ ಏನಾಗಿರುತ್ತಾರೆ? ಎಂಬ ರಹಸ್ಯಗಳನ್ನೆಲ್ಲ ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ರಾಧಿಕಾ ಭಾಗದ ಚಿತ್ರೀಕರಣ ಸಹ ಸದ್ದಿಲ್ಲದೆ ಶುರುವಾಗಿದೆ.
ಚಿತ್ರದ ಹೆಸರೇ ಹೇಳುವಂತೆ ಇದು ಎಡಚರರ ಕುರಿತಾದ ಚಿತ್ರವಾಗಿದೆ. ಎಡಚರರು ಅನುಭವಿಸುವ ಹಲವು ಸಮಸ್ಯೆಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದ್ದು, ಕ್ರಮೇಣ ಚಿತ್ರ ಗಂಭೀರವಾಗುತ್ತಾ ಹೋಗಿ, ಥ್ರಿಲ್ಲರ್ ರೂಪ ಪಡೆದುಕೊಳ್ಳುತ್ತದಂತೆ. ಸಮರ್ಥ್ ಕಡಕೋಳ್ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಹೈಫನ್ ಪಿಕ್ಚರ್ಸ್ ಬ್ಯಾನರ್ನಡಿ ಗುರುದತ್ ಗಾಣಿಗ ಹಾಗೂ ಸಮರ್ಥ್ ಬಿ ಕಡಕೊಳ್ ನಿರ್ಮಿಸುತ್ತಿದ್ದಾರೆ.
‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ದಿಗಂತ್, ಧನು ಹರ್ಷ, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, 'ಭಜರಂಗಿ' ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದ ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದು, ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ.