

ಬೆಂಗಳೂರು: ನಟ ಯಶ್ ಮತ್ತು ರಾಧಿಕಾ ದಂಪತಿ ಇಬ್ಬರು ಮುದ್ದಾದ ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗದೇ ಪುಟಾಣಿಗಳಿಗಾಗಿಯೇ ಸಮಯ ಮೀಸಲಿಟ್ಟಿದ್ದರು ಈ ಸ್ಟಾರ್ ಜೋಡಿ. ಇದೀಗ ಮಗಳು ಐರಾ ತಮ್ಮನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ.
ಹೌದು, ಯಥರ್ವನ ಜತೆಗೆ ಇದ್ದು, ಅವನ ಬೇಕು ಬೇಡಗಳನ್ನು ಐರಾ ವಿಚಾರಿಸುತ್ತಿದ್ದಾಳೆ. ಅಷ್ಟೇ ಅಲ್ಲ ಒಂದರ್ಥದಲ್ಲಿ ಎಲ್ಲವನ್ನು ಹೇಳಿಕೊಡುವ ಟೀಚರ್ ಸಹ ಆಗಿದ್ದಾಳೆ. ಅದಕ್ಕೆ ಬೇಕಾದ ಸಾಕ್ಷ್ಯವನ್ನು ರಾಧಿಕಾ ಪಂಡಿತ್ ವಿಡಿಯೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಯಶ್ ಮತ್ತು ರಾಧಿಕಾ ಜತೆಗಿರುವ ಫೋಟೋದಲ್ಲಿ ಯಥರ್ವ ಅಪ್ಪ ಮತ್ತು ಅಮ್ಮನನ್ನು ಗುರುತಿಸುತ್ತಿದ್ದಾನೆ. ಹಾಗೇ ಗುರುತಿಸುವುದನ್ನು ಹೇಳಿಕೊಡುತ್ತಿರುವುದು ಅಕ್ಕ ಐರಾ. ಈ ವಿಡಿಯೋಕ್ಕೆ ಅಷ್ಟೇ ಚಂದದ ಕ್ಯಾಪ್ಶನ್ ನೀಡಿದ್ದಾರೆ ರಾಧಿಕಾ. ‘ವಿದ್ಯಾರ್ಥಿ ಇದೀಗ ಟೀಚರ್ ಆಗಿ ಬದಲಾಗಿದ್ದಾರೆ. ನನ್ನ ಕೆಲಸ ಮುಗಿಯಿತು’ ಎಂದಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಐರಾಳ ವಿಡಿಯೋವನ್ನು ರಾಧಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಫೋಟೋದಲ್ಲಿ ಅಪ್ಪ ಮತ್ತು ಅಮ್ಮನನ್ನು ಐರಾ ಗುರುತಿಸಿದ್ದಳು. ಇದೀಗ ಯಥರ್ವನ ಸರದಿ. ಸದ್ಯ ಈ ವಿಡಿಯೋಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಶೇರ್ ಸಹ ಮಾಡುತ್ತಿದ್ದಾರೆ.