

ಹೈದರಾಬಾದ್: ಸಿನಿಮಾ ಸ್ಟಾರ್ಗಳನ್ನು ಭೇಟಿಯಾಗಲು ಅಭಿಮಾನಿಗಳು ಮಾಡುವ ಹರಸಾಹಸ ಒಂದೊಂದಲ್ಲ. ನೆಚ್ಚಿನ ನಟನನ್ನು ನೋಡಬೇಕು, ಆತನ ಜತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಎಲ್ಲಿಂದಲೋ ಆಗಮಿಸುತ್ತಾರೆ. ಇದೀಗ ಪಕ್ಕದ ಟಾಲಿವುಡ್ನಲ್ಲಿ ಆಗಿದ್ದೂ ಅದೇ.
ಅಂದರೆ, ಟಾಲಿವುಡ್ ಸೂಪರ್ಸ್ಟಾರ್ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಯೊಬ್ಬ ನೂರಾರು ಕಿಲೋಮೀಟರ್ ನಡೆದು ಬಂದಿದ್ದಾನೆ. ಸೆ. 17ರಂದು ಆಂಧ್ರದ ಮಚೆರ್ಲಾದಿಂದ ಶುರುವಾದ ಪಿ ನಾಗೇಶ್ವರ್ ರಾವ್ ಎಂಬುವವರ ಪಾದಯಾತ್ರೆ, ಇದೀಗ ಬಂಜಾರಾ ಹಿಲ್ಗೆ ತಲುಪಿದೆ. ಇನ್ನು ಕೆಲ ಗಂಟೆಗಳಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲಿದ್ದು, ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲಿದ್ದಾನೆ.
ಜೈ ಅಲ್ಲು ಅರ್ಜುನ್ ಅಣ್ಣ.. ಮಚೆರ್ಲಾ ಟು ಹೈದರಾಬಾದ್ ಪಾದಯಾತ್ರೆ.. ಎಂಬ ಬೋರ್ಡ್ ಹಿಡಿದು ನಾಗೇಶ್ವರ್ ರಾವ್ ಪಾದಯಾತ್ರೆ ಮಾಡುತ್ತಿದ್ದಾರೆ. ಆತನ ಪಾದಯಾತ್ರೆಯ ವಿಡಿಯೋವನ್ನು ಇನ್ನೊಬ್ಬ ಅಲ್ಲು ಅರ್ಜುನ್ ಅಭಿಮಾನಿ ಸೋಷಿಯಲ್ ಮೀಡಿಯಾ ಶೇರ್ ಮಾಡಿಕೊಂಡು, ನಟನಿಗೆ ಮಾಹಿತಿ ರವಾನಿಸಿದ್ದಾನೆ. ಅಂದಹಾಗೆ ಮಚೆರ್ಲಾದಿಂದ ಹೈದರಾಬಾದ್ಗೆ 250 ಕಿಲೋ ಮೀಟರ್ ಅಂತರವಿದೆ. ಈ 250ಕಿಮೀ ಹಾದಿಯನ್ನು ನಾಗೇಶ್ವರ್ ಒಂದು ವಾರದಲ್ಲಿ ಪೂರೈಸಿದ್ದಾನೆ. (ಏಜೆನ್ಸೀಸ್)