

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮ ಸಂಭ್ರಮದ ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡನಲ್ಲಿ 15 ವರ್ಷದಿಂದ 25 ವರ್ಷದೊಳಗಿನ ಯುವ ಪ್ರತಿಭೆಗಳಿಗಾಗಿ ಏರ್ಪಡಿಸಿದ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತಂಡ ಪ್ರಥಮ ಬಹುಮಾನ ಪಡೆಯಿತು.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿಸಿದ, ಶೇಖರ ಶೆಟ್ಟಿಗಾರ್ ಮತ್ತು ಆದಿತ್ಯ ಅಂಬಲಪಾಡಿ ನಿರ್ದೇಶನದ ‘ಸತಿ ಉಲೂಪಿ’ ಪ್ರಸಂಗ ಪ್ರದರ್ಶನ ನೀಡಿ ಒಂದು ಲಕ್ಷ ರೂ. ಹಾಗೂ ಸ್ಮರಣಿಕೆ ಒಳಗೊಂಡ ಪ್ರಥಮ ಬಹುಮಾನವನ್ನು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಪಡೆಯಿತು. ಸಮಗ್ರ ವೈಯಕ್ತಿಕ ವಿಭಾಗದಲ್ಲಿ ಶಬರೀಶ್ ಆಚಾರ್ಯ, ಆಹಾರ್ಯ ವಿಭಾಗದಲ್ಲಿ ಮುಖೇಶ್ ದೇವಧರ್, ಲಿಖಿತ ವಿಭಾಗದಲ್ಲಿ ಪ್ರಜ್ವಲ್ ಬಿ.ಶೆಟ್ಟಿ ಬಹುಮಾನ ಪಡೆದರು.
ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಕಳೆದ ಎರಡು ದಶಕಗಳಿಂದ ಯಕ್ಷಗಾನದ ವಿವಿಧ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನಾಡಿನ ವಿವಿಧ ಯಕ್ಷಗಾನ ಮೇಳಗಳಲ್ಲಿ ವೃತ್ತಿಪರವಾಗಿ ದುಡಿಯುತ್ತಿದ್ದು ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಈ ಮೊದಲು ಹಲವಾರು ಸ್ಪರ್ಧೆಗಳನ್ನು ಗೆದ್ದು ಬಹುಮಾನ ಪಡೆದುಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ವಿಜೇತ ತಂಡವನ್ನು ಅವರು ಅಭಿನಂದಿಸಿದ್ದಾರೆ.