ಮುಂಬೈ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಮುಂಬೈ-ನಾಗ್ಪುರ ಎಕ್ಸ್ಪ್ರೆಸ್ ವೇನಲ್ಲಿ ನಡೆದಿದೆ. ಔರಂಗಬಾದ್ ಜಿಲ್ಲೆಯ ಜಾಲ್ನಾದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಶುಕ್ರವಾರ ರಾತ್ರಿ 11ರ ಸುಮಾರಿಗೆ ಸ್ವಿಫ್ಟ್ ಕಾರೊಂದು ಟ್ಯಾಂಕ್ ಭರ್ತಿ ಮಾಡಿಸಿಕೊಂಡ ಬಳಿಕ ರಾಂಗ್ವೇನಲ್ಲಿ ಹೈವೇ ಪ್ರವೇಶಿಸಲು ಚಾಲಕ ಮುಂದಾಗಿದ್ದಾನೆ. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಮೃತದೇಹಗಳನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತ ಎಷ್ಟು ತೀವ್ರವಾಗಿತ್ತೆಂದರೆ, ಎರ್ಟಿಗಾ ಕಾರು ಗಾಳಿಗೆ ಹಾರಿ ಹೆದ್ದಾರಿಯ ಬ್ಯಾರಿಕೇಡ್ ಮೇಲೆ ಬಿದ್ದಿತು. ಕಾರಿನಲ್ಲಿದ್ದವರು ರಸ್ತೆ ಮೇಲೆ ಬಿದ್ದರು. ಮತ್ತೊಂದು ಕಾರು ಡಿಕ್ಕಿ ರಭಸಕ್ಕೆ ಅಪ್ಪಚ್ಚಿಯಾಗಿತ್ತು. ಅಪಘಾತದ ಭೀಕರತೆಗೆ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಕ್ತಸಿಕ್ತ ಮೃತದೇಹಗಳು ಹೆದ್ದಾರಿಯಲ್ಲಿ ಬಿದ್ದಿರುವ ದೃಶ್ಯ ವೈರಲ್ ಆಗಿದೆ.