ನವದೆಹಲಿ: 17ನೇ ಆವೃತ್ತಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲೂ ಟಾಪ್ ರನ್ ಸ್ಕೋರರ್ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುಟುಕು ವಿಶ್ವಸಮರದಲ್ಲಿ ವಿರಾಟ್ ಯಾಕೋ ಮಂಕಾದಂತೆ ಕಾಣುತ್ತಿದ್ದು, ಬಾಂಗ್ಲಾದೇಶ ವಿರುದ್ಧ ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನವನ್ನುನೀಡಿಲ್ಲ. ಇತ್ತ ವಿರಾಟ್ ಕೊಹ್ಲಿಯ ಫಾರ್ಮ್ ಟೀಮ್ ಇಂಡಿಯಾವನ್ನು ಚಿಂತೆಗೆ ದೂಡಿದ್ದು, ಇದರ ನಡುವೆಯೇ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ವಿರಾಟ್ ಕೊಹ್ಲಿ ಕುರಿತು ಟೀಕೆಗಳನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ರಶೀದ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು ಆರ್ಸಿಬಿ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಇದು ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮಾಜಿ ನಾಯಕನ ಹೇಳಿಕೆಗೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಯಾರು ವಿನ್ನರ್? ಐಸಿಸಿ ನಿಯಮವೇನು?
ಟಿ20 ವಿಶ್ವಕಪ್ ಎಂದರೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪರ ಆಡಿದಂತಲ್ಲ. ಅಲ್ಲಿ ವಾತಾವರಣಕ್ಕೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದ್ದು, ಕೊಹ್ಲಿ ಇದನ್ನು ಗಮನಿಸಬೇಕಿದೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನ ಪಿಚ್ಗಳಲ್ಲಿ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡುತ್ತಿದ್ದು, ಇದನ್ನು ಕೊಹ್ಲಿ ಅರ್ಥ ಮಾಡಿಕೊಂಡು ಆಡಬೇಕಿದೆ.
ವಿರಾಟ್ ಕೊಹ್ಲಿ ತಮ್ಮ ಯೋಜನೆಗಳಿಂದ ಹೊರಗುಳಿದಿದ್ದು, ಇದು ಬೆಂಗಳೂರಿನ ಪಿಚ್ ಅಲ್ಲಾ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ ಗೆಲುವು ಸಾಧಿಸಿ ಗೆಲುವು ಕಂಡಿರುವುದು ಅಷ್ಟು ಸುಲಭದ ಮಾತಲ್ಲ. ಕೊಹ್ಲಿ ತಮ್ಮ ಯೋಜನೆಗಳನ್ನು ಬದಲಿಸಿಕೊಂಡರೆ ಫೈನಲ್ನಲ್ಲಿ ಚೆನ್ನಾಗಿ ಆಡಬಹುದಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.