ಬೆಳಗ್ಗೆ ಹಾಸಿಗೆ ಬಿಟ್ಟು ಏಳೋದಕ್ಕಾಗಲ್ಲ ಏಕೆ ಗೊತ್ತಾ? ನಿದ್ರೆಯ ಬಗ್ಗೆ ನಿಮಗೆ ಗೊತ್ತೇ ಇರದ ವಿಷಯಗಳಿವು!

sleep
Published on

ಬೆಂಗಳೂರು: ನಿದ್ರೆ ಇಲ್ಲದೆ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಒಬ್ಬ ಆರೋಗ್ಯವಂತ ಮನುಷ್ಯನಿಗೆ ದಿನವೊಂದಕ್ಕೆ 7ರಿಂದ 8 ತಾಸು ನಿದ್ದೆ ಬೇಕು ಎನ್ನುತ್ತದೆ ಮೆಡಿಕಲ್​ ಸೈನ್ಸ್​. ಆದರೆ ಯಾಂತ್ರಿಕ ಬದುಕಿಗೆ ಅಂಟಿಕೊಂಡು ಯಂತ್ರಗಳಾಗಿರುವ ನಮಗೆ ನಾಲ್ಕೈದು ತಾಸಿನ ನಿದ್ರೆ ಮಾಡುವುದೂ ಸಹ ಕಷ್ಟ ಸಾಧ್ಯವಾಗಿದೆ.

ನಿದ್ರೆಯ ಪ್ರಾಮುಖ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವ ನಿದ್ರೆಯ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಮಾ.13ರಂದು ವಿಶ್ವ ನಿದ್ರೆಯ ದಿನವನ್ನು ಆಚರಿಸಲಾಗುತ್ತಿದೆ. ನಿದ್ರೆಯ ಬಗ್ಗೆ ನಮಗೆ ತಿಳಿಯದ ಅನೇಕ ವಿಚಾರಗಳಿವೆ. ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ.

1) ಮನೆಯಲ್ಲಿ ಬೆಕ್ಕು ಸಾಕಿರುವವರಿಗೆ ಬೆಕ್ಕಿನ ನಿದ್ರೆಯ ಬಗ್ಗೆ ತಿಳಿದಿರುತ್ತದೆ. ಎಲ್ಲೆಂದರಲ್ಲಿ ಮಲಗಿ ನಿದ್ರೆ ಮಾಡುತ್ತಿರುತ್ತವೆ ಆ ಬೆಕ್ಕುಗಳು. ಪ್ರತಿ ಬೆಕ್ಕು ಸಹ ಅದರ ಜೀವಿತಾವಧಿಯ ಮೂರನೇ ಎರಡು ಭಾಗವನ್ನು ನಿದ್ರೆ ಮಾಡುತ್ತಲೇ ಕಳೆಯುತ್ತವೆ.

2) ಮನುಷ್ಯ ಸಹ ನಿದ್ರೆಯಲ್ಲೇನು ಹಿಂದುಳಿದಿಲ್ಲ. ಸರಾಸರಿಯಾಗಿ ಮನುಷ್ಯನೊಬ್ಬ ತನ್ನ ಜೀವಿತಾವಧಿಯ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲೇ ಕಳೆಯುತ್ತಾನೆ. ಈ ಲೆಕ್ಕಾಚಾರವು ಆತನ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.

3) ಕ್ಯಾಲಿಫೋರ್ನಿಯಾದ ವಿದ್ಯಾರ್ಥಿಯೊಬ್ಬ 11 ದಿನಗಳ ಕಾಲ ನಿದ್ರೆ ಮಾಡದೆ ಜೀವನವನ್ನು ಕಳೆದಿದ್ದಾನೆ. ಅದು ಈವರೆಗಿನ ದಾಖಲೆಯಾಗಿದೆ. ಆದರೆ ದಿನಗಟ್ಟಲೆ ನಿದ್ರೆ ಬಿಡುವುದರಿಂದಾಗಿ ಮಾನವನ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

4) ನಿದ್ರೆಯಲ್ಲಿ ಮಾತನಾಡುವವರನ್ನು ನೀವು ನೋಡಿರುತ್ತೀರಿ. ನೀವೂ ಮಾತನಾಡಿರುತ್ತೀರಿ ಕೂಡ. ಆದರೆ ಬಾಯಿ ಬಾರದ ಮೂಕರು ಹೇಗೆ ಮಾತನಾಡುತ್ತಾರೆ? ಕೆಲ ಮೂಕರು ನಿದ್ರೆಯಲ್ಲಿ ಸನ್ನೆ ಮಾಡಿ ಮಾತನಾಡುತ್ತಾರೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ.

5) ಕೆಲವರಿಗೆ ಬೆಳಗ್ಗೆ ಹಾಸಿಗೆ ಬಿಟ್ಟು ಎದ್ದೇಳುವುದಕ್ಕೇ ಆಗುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿದ್ರೆ ನನ್ನನ್ನು ಬಿಡುತ್ತಿಲ್ಲ ಎಂದು ಹೇಳುತ್ತಿರುತ್ತಾರೆ. ಅದಕ್ಕೆ ಡಿಸಾನಿಯಾ ಎಂದು ಕರೆಯಲಾಗುತ್ತದೆ. ದೀರ್ಘಕಾಲದ ಆಯಾಸವಾದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

6) ನಿದ್ರೆಯಲ್ಲಿ ನಡೆದಾಡುವುದು, ಅಸ್ವಾಭಾವಿಕ ಚಲನೆ ಮಾಡುವದನ್ನು ಪ್ಯಾರಾಸೋಮ್ನಿಯಾ ಎನ್ನಲಾಗುತ್ತದೆ. ದೇಹದಲ್ಲಿ ಅರ್ಧ ನಿದ್ರೆ ಉಂಟಾದರೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.

7) ಸ್ವಇಚ್ಛೆಯಿಂದ ನಿದ್ರೆಯನ್ನು ವಿಳಂಬಗೊಳಿಸಿಕೊಳ್ಳಬಲ್ಲ ಏಕೈಕ ಜೀವಿ ಎಂದರೆ ಅದು ಮನುಷ್ಯ. ಸಾಮಾನ್ಯವಾಗಿ ಮನುಷ್ಯನಿಗೆ ರಾತ್ರಿ 2 ಗಂಟೆಯ ಸಮಯಕ್ಕೆ ಮತ್ತು ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ನಿದ್ರೆ ಬರುತ್ತದೆ.

8) ಆರೋಗ್ಯವಂತ ಮನುಷ್ಯ ಮಲಗಿ 10ರಿಂದ 15 ನಿಮಿಷಕ್ಕೆ ನಿದ್ರೆ ಆವರಿಸುತ್ತದೆ. ಒಂದು ವೇಳೆ ಅದಕ್ಕಿಂತ 5 ನಿಮಿಷಗಳಲ್ಲೇ ನಿಮಗೆ ನಿದ್ರೆ ಬಂದಿತೆಂದರೆ ನಿಮ್ಮಲ್ಲಿ ನಿದ್ರೆಯ ಅಭಾವ ಉಂಟಾಗಿದೆ ಎಂದರ್ಥ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net