

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ, ಬೆಳ್ತಂಗಡಿ ಅರಣ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ಗಿಡ ನೆಡುವ ಕಾರ್ಯಕ್ರಮ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆಯಿತು.
ಬೆಳ್ತಂಗಡಿ ನ್ಯಾಯಾಲಯದ ಪ್ರಧಾನ ಹಿರಿಯ ನ್ಯಾಯಾಧೀಶ, ತಾ.ಕಾ.ಸೇ.ಸಮಿತಿಗಳ ಅಧ್ಯಕ್ಷ ಶಶಿಧರ ಎಂ.ಗೌಡ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಬೆಳ್ತಂಗಡಿ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್.ಮಾತನಾಡಿ, ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಶುದ್ಧ ಪರಿಸರದ ಮೂಲಕ ಶುದ್ಧ ಗಾಳಿ ಸಿಕ್ಕಿ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ಈ ನ್ಯಾಯಾಲಯದ ಆವರಣದಲ್ಲಿ ಹಿಂದೆ ನ್ಯಾಯಧೀಶರು, ವಕೀಲರು, ಸಿಬ್ಬಂದಿ ನೆಟ್ಟ ಗಿಡಗಳಿಂದ ಪರಿಸರ ಉತ್ತಮವಾಗಿದೆ. ಮುಂದಕ್ಕೂ ನೆಟ್ಟ ಗಿಡಗಳನ್ನು ಪೋಷಿಸಿ ರಕ್ಷಿಸಬೇಕು ಎಂದರು.
ವನ್ಯಜೀವಿ ವಲಯಾರಣ್ಯಾಧಿಕಾರಿ ಸ್ವಾತಿ ಮಾತನಾಡಿ, ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಅಭಿವೃದ್ಧಿಯ ಜತೆಗೆ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಮಾತನಾಡಿ, ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಹಿಂದಿನ ನ್ಯಾಯಧೀಶರು ಉತ್ತಮ ಗಿಡಗಳನ್ನು ಬೆಳೆಸಲು ಸಹಕಾರ ನೀಡಿ ಸುಂದರ ಪರಿಸರ ನಿರ್ಮಿಸಿದ್ದಾರೆ. ಇದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ನವೀನ್.ಬಿ.ಕೆ,. ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಇಳಂತಿಲ, ಉಪವಲಯಾಣ್ಯಾಧಿಕಾರಿಗಳಾದ ರವೀಂದ್ರ ಕೆ., ರಾಘವೇಂದ್ರ, ಮಹೇಶ, ಬೀಟ್ ಅರಣ್ಯಾಧಿಕಾರಿ ಸತೀಶ್, ಸಿಬ್ಬಂದಿ, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.