

ವಿಜಯಪುರ: ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿರುವ ಮೈಕ್ರೋ ಫೈನಾನ್ಸ್ (Micro Finance) ಹಾವಳಿ ವಿಜಯಪುರಕ್ಕೂ ಲಗ್ಗೆ ಇಟ್ಟಿದ್ದು, ಕಿರುಕುಳಕ್ಕೆ ಹೆದರಿ ತಾಳಿ ಮಾರಿದರೂ ತೀರದ ಸಾಲದಿಂದ ಮುಕ್ತಿಕೊಡಿಸುವಂತೆ ರಾಜ್ಯ ಮಹಿಳಾ ಆಯೋಗದ ಮುಂದೆ ಮಹಿಳೆಯೊಬ್ಬರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸುತ್ತಿರಬೇಕಾದರೆ ಮೈಕ್ರೋ ಫೈನಾನ್ಸ್‌ಗಳಿಂದ (Micro Finance) ಮುಕ್ತಿ ಕರುಣಿಸುವಂತೆ ಸಿಂಧಗಿ ತಾಲ್ಲೂಕಿನ ಮಾಡಬಾಳ ಗ್ರಾಮದ ನಿಂಬೆವ್ವ ದ್ಯಾಮಪ್ಪ ಮಾದರ ಎಂಬುವವರು ತಮ್ಮ ಕಣ್ಣೀರಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಬಳಿಕ ಲಿಖಿತವಾಗಿ ಮನವಿ ಸಲ್ಲಿಸಿ ಮೈಕ್ರೋಫೈನಾನ್ಸ್‌ಗಳಿಂದ ಆಗುತ್ತಿರುವ ಕಿರುಕುಳದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಬಡತನದಲ್ಲಿಯೂ ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದೇನೆ. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಪುತ್ರಿ ಮದುವೆಗಾಗಿ ಸಾಲ ಮಾಡಿದ್ದೇನೆ. ಡಿಎಸ್‌ಎಸ್, ನವಚೈತನ್ಯ, ಸಬ್‌ಕೆ ಹಾಗೂ ಆಸರೆ ಎಂಬ ಫೈನಾನ್ಸ್‌ನಿಂದ ಸಾಲ ಪಡೆಯಲಾಗಿದೆ. ಒಟ್ಟು ಮೂರು ಲಕ್ಷ ಸಾಲ ಇತ್ತು. ಈಗಾಗಲೇ ಎರಡು ಲಕ್ಷ ರೂಪಾಯಿ ಸಾಲ ತೀರಿಸಲಾಗಿದೆ. ಇನ್ನುಳಿದ ಸಾಲ ತೀರಿಸಲು ಸಮಯಾವಕಾಶ ಬೇಕು. ಆದರೆ, ಅದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಾಳಿ ಮಾರಿ ಬಡ್ಡಿ ಕಟ್ಟಿದ್ದೇನೆ. ನಕಲಿ ತಾಳಿ ಧರಿಸಿಕೊಂಡಿದ್ದೇನೆ. ಆದರೂ ಕಿರುಕುಳ ತಪ್ಪದ ಹಿನ್ನೆಲೆ ಸಾವೊಂದೇ ಸದ್ಯದ ದಾರಿಯಾಗಿದೆ ಎಂದು ನಿಂಬೆವ್ವ ಕಣ್ಣೀರು ಹಾಕಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಧೈರ್ಯವಾಗಿ ದೂರು ದಾಖಲಿಸುವಂತೆ ನಿಂಬೆವ್ವಗೆ ತಿಳಿಸಿದರು.