

Skin: ಚರ್ಮದ ಬಣ್ಣ ಮಾಸುವ ಭಯದಿಂದ ಸೂರ್ಯನ ಬೆಳಕನ್ನು ತಪ್ಪಿಸಿಕೊಂಡ ಮಹಿಳೆಯೊಬ್ಬಳು ತನ್ನ ಮೂಳೆಗಳನ್ನು ಮುರಿದುಕೊಂಡ ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡುವಿನಲ್ಲಿ ನಡೆದಿದೆ.
48 ವರ್ಷದ ಮಹಿಳೆ ರಾತ್ರಿ ನಿದ್ರೆಯ ಸಮಯದಲ್ಲಿ ಹಾಸಿಗೆಯಲ್ಲಿ ಒಂದು ಕಡೆ ತಿರುಗುವಾಗ ಮೂಳೆ ಮುರಿದಿದೆ. ಸುಮಾರು 2 ವರ್ಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ಕಂಡುಕೊಂಡರು.
ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಯ ಸ್ಥಿತಿಯ ವಿವರಗಳನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಚಿಕ್ಕ ವಯಸ್ಸಿನಿಂದಲೂ ತನ್ನ ಚರ್ಮದ ಮೇಲೆ 'ಸನ್ ಟ್ಯಾನ್' ಆಗುವುದನ್ನು ತಪ್ಪಿಸಲು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುತ್ತಿದ್ದಳು ಎಂದು ಆಕೆಯ ಸಂಬಂಧಿಕರು ಹೇಳಿದ್ದಾರೆ. ಹೊರಗೆ ಹೋಗುವಾಗಲೂ ಆಕೆ ಮೈತುಂಬಾ ಬಟ್ಟೆಗಳನ್ನು ಧರಿಸುತ್ತಿದ್ದಳು. ತನ್ನ ಬಿಳಿ ಚರ್ಮವನ್ನು ಕಾಪಾಡಿಕೊಳ್ಳಲು ಅವಳು ವಿಶೇಷವಾಗಿ ಜಾಗರೂಕಳಾಗಿದ್ದಳು.
ಈ ಅಪಾಯಕಾರಿ ಜೀವನಶೈಲಿಯು ಯುವತಿಯ ದೇಹದಲ್ಲಿ ವಿಟಮಿನ್ ಡಿ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗಲು ಕಾರಣವಾಯಿತು. ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಮತ್ತು ಮೂಳೆಯ ಬಲವನ್ನು ಕಾಪಾಡಿಕೊಳ್ಳುವಲ್ಲಿ ವಿಟಮಿನ್ ಡಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ದೇಹವು ಆರೋಗ್ಯವಾಗಿರಲು ಸ್ವಲ್ಪ ಪ್ರಮಾಣದ ಸೂರ್ಯನ ಬೆಳಕು ಬೇಕಾಗುತ್ತದೆ. ಆದರೆ, ವಿಟಮಿನ್ ಕೊರತೆಯಿಂದ ಮಹಿಳೆ, ಗಂಭೀರವಾದ ಆಸ್ಟಿಯೊಪೊರೋಸಿಸ್ ಸ್ಥಿತಿಯನ್ನು ಎದುರಿಸುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಟಿಯೊಪೊರೋಸಿಸ್ ಅಂದ್ರೆ ಮೂಳೆಗಳ ಬಲ ಕಡಿಮೆಯಾಗುತ್ತದೆ. ಈ ರೀತಿ ಆದಾಗ ದೇಹದ ಸಣ್ಣದೊಂದು ಚಲನೆಯೂ ಸಹ ಮುರಿತಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. (ಏಜೆನ್ಸೀಸ್)