

Wife Temple : ಪತ್ನಿ ಬದುಕಿರುವಾಗಲೇ ಇನ್ನೊಬ್ಬಳ ಜತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಈ ಕಾಲದಲ್ಲಿ ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ನೆಲೆಸಿರುವ ಎಲೆಕ್ಟ್ರಿಷಿಯನ್ ಒಬ್ಬರು ತನ್ನ ಮೃತ ಪತ್ನಿಯ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಿ, ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಅರಿಯಲೂರಿನ ವಿಜಯಕುಮಾರ್ 16 ವರ್ಷಗಳ ಹಿಂದೆ ಕವಿತಾ ಎಂಬ ಮಹಿಳೆಯನ್ನು ವಿವಾಹವಾದರು. ಮದುವೆಯ ನಂತರವೂ ಕವಿತಾ ಅವರಿಗೆ ವಿಜಯ್ ಅವರು ಕಾಲೇಜು ಶಿಕ್ಷಣ ಕೊಡಿಸಿದರು. ಇದೊಂದು ಅರೆಂಜ್ ಮ್ಯಾರೇಜ್ ಆಗಿದ್ದರು ಕೂಡ ಕವಿತಾರನ್ನು ವಿಜಯಕುಮಾರ್ ತುಂಬಾ ಪ್ರೀತಿ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಒಂದು ದಿನವೂ ಬಿಟ್ಟಿರಲಾರದಷ್ಟು ಆಳವಾಗಿ ಪ್ರೀತಿ ಮಾಡುತ್ತಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು.
ಒಮ್ಮೆ ಕವಿತಾ ಅವರು ತಮ್ಮ ಪತಿ ವಿಜಯಕುಮಾರ್ ಅವರೊಂದಿಗೆ ತಿರುಚ್ಚಿಯ ಖಾಸಗಿ ಆಸ್ಪತ್ರೆಗೆ ತಪಾಸಣೆಗಾಗಿ ಹೋಗಿದ್ದರು. ಅದು 2022. ತಿರುಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ, ಕೃತಕ ಗರ್ಭಧಾರಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವಾಗ ಮಿತಿಮೀರಿದ ಔಷಧದ ಸೇವನೆಯಿಂದ ನಿಧನರಾದರು.
ದಿನಗಳು ಕಳೆದರು ಕೂಡ ಪತ್ನಿಯ ಮೇಲಿನ ಪ್ರೀತಿ ಮಾತ್ರ ವಿಜಯ್ ಕುಮಾರ್ ಅವರಿಗೆ ಕಡಿಮೆಯಾಗಲಿಲ್ಲ. ಪತ್ನಿಯ ಜತೆ ಕಳೆದ ದಿನಗಳನ್ನು ಎಣಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪ್ರೀತಿಯ ಪತ್ನಿಗಾಗಿ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿ, ಇಳಂಗೇರಿ ಗ್ರಾಮದಲ್ಲಿ ತಮ್ಮ ಪತ್ನಿ ಕವಿತಾಗಾಗಿ ದೇವಾಲಯವನ್ನು ಸಹ ನಿರ್ಮಾಣ ಮಾಡಿದ್ದಾರೆ.
ಪತ್ನಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಪ್ರತಿ ನಾಲ್ಕು ದಿನಗಳಿಗೊಮ್ಮೆ, ಕೆಲಸಕ್ಕೆ ಹೋಗುವ ಮೊದಲು, ವಿಜಯಕುಮಾರ್ ಪತ್ನಿಯ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ವಿಜಯಕುಮಾರ್ನ ಅತ್ತೆ, ಮಾವ ಮತ್ತು ಸಂಬಂಧಿಕರು ಮರುಮದುವೆ ಮಾಡಿಕೊಳ್ಳಲು ಆತನನ್ನು ಕೇಳಿಕೊಂಡರೂ, ತನ್ನ ಹೆಂಡತಿ ಕವಿತಾಳೊಂದಿಗೆ ಜೀವನ ಮುಗಿದಿದೆ ಎಂದು ಹೇಳುತ್ತಾರಂತೆ. ಬದುಕಿದರೆ ಕವಿತಾ ನೆನಪುಗಳ ಜತೆ ಬದುಕುತ್ತೇನೆ ಎಂದು ಹೇಳುತ್ತಿದ್ದಾರಂತೆ.
ಕವಿತಾ ತನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು. ಆಕೆಯ ವಾತ್ಸಲ್ಯಕ್ಕೆ ಯಾವುದೇ ಮಿತಿಗಳಿಲ್ಲ. ಅದನ್ನು ಪದಳಿಂದ ಹೇಳಲಾಗದು ಎಂದು ವಿಜಯ್ಕುಮಾರ್ ಹೇಳುತ್ತಾರೆ. ಮೃತ ಪತ್ನಿಯ ಮೇಲೂ ವಿಜಯ್ ಕುಮಾರ್ ಇಟ್ಟಿರುವ ಪ್ರೀತಿಯನ್ನು ಕಂಡು ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ. (ಏಜೆನ್ಸೀಸ್)