

ನವದೆಹಲಿ: ತನ್ನನ್ನು ಅವಾಯ್ಡ್ ಮಾಡಿದ್ದಳು ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಪ್ರೇಯಸಿಗೆ ಅನೇಕ ಬಾರಿ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನವದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ.
ಇರಿತಕ್ಕೊಳಗಾದ 23 ವರ್ಷದ ಮಹಿಳೆ ಸ್ಥಿತಿ ಗಂಭಿರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಗೌರವ್ ಪಾಲ್ (27) ವಶಕ್ಕೆ ಪಡೆದಿರುವ ಪೊಲೀಸರು 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಚಂದನ್ ಚೌಧರಿ, ಬಂಧಿತ ಆರೋಪಿ ಗೌರವ್ ತನ್ನ ಪ್ರೇಯಸಿ ತನ್ನನ್ನು ಅವಾಯ್ಡ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಹೆದರಿಸಲು ಹೋಗಿ ಕೃತ್ಯ ಎಸಗಿದ್ದಾನೆ. ಮೊದಲಿಗೆ ಆಕೆಯನ್ನು ಭೇಟಿ ಮಾಡುವ ನೆಪದಲ್ಲಿ ಕರೆಸಿಕೊಂಡ ಆರೋಪಿ ಬಳಿಕ ಕ್ಯಾಬ್ ಒಂದನ್ನು ಬುಕ್ ಮಾಡಿ ಬೇರೆಡೆಗೆ ತೆರಳೋಣ ಎಂದು ಹೇಳಿದ್ದಾನೆ.
ಕಾರ್ನಲ್ಲಿ ಕುಳಿತುಕೊಂಡ ಬಳಿಕ ಆರೋಪಿ ಯುವತಿಗೆ ಚಾಕುವಿನಿಂದ ಇರಿಯಲು ಶುರು ಮಾಡಿದ್ದು, ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಇದನ್ನು ಗಮನಿಸಿದ ಕ್ಯಾಬ್ ಚಾಲಕ ಆತನನ್ನು ಸಾರ್ವಜನಿಕರ ಸಹಾಯದೊಂದಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಅಕ್ಟೋಬರ್ 10ರಂದು ಗಾಯಾಳು ಯುವತಿ ಬಂಧಿತ ಆರೋಪಿ ಪಾಲ್ ತನಗೆ ಹಣಕಾಸಿನ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಕಂಟ್ರೋಲ್ ರೂಮಿಗೆ ಕರೆ ಮಾಡಿ ದೂರು ದಾಖಲಿಸಿದ್ದಳು.
ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಭಾರತ ದಂಡ ಸಂಹಿತೆ 307 (ಕೊಲೆ ಯತ್ನ)ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳು ಹೇಳಿಕೆ ಪಡೆದು ಚಾರ್ಜ್ಶೀಟ್ ಸಿದ್ದಪಡಿಸಿ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಚಂದನ್ ಚೌಧರಿ ತಿಳಿಸಿದ್ದಾರೆ.