ನನ್ನಿಂದ ಬೆತ್ತಲೆ ಪೂಜೆ ಮಾಡಿಸಿದ್ದಾರೆ! ಸೆಲ್ಫಿ ವಿಡಿಯೋದಲ್ಲಿ ಶಾಸಕನ ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ

Shobharani
Published on

ವಿಜಯವಾಡ: ಕರ್ನೂಲ್​ನ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಶಾಸಕ ಹಫೀಜ್​ ಖಾನ್​ ಹೆಸರು ಆಂಧ್ರ ಪ್ರದೇಶದಲ್ಲಿ ಇತ್ತೀಚಗೆ ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಮಹಿಳಯೊಬ್ಬಳು ಮಾಡಿರುವ ಆರೋಪ. ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿರುವ ಮಹಿಳೆ ಶಾಸಕರು ನನಗೆ ಕಿರುಕುಳ ನೀಡಿದ್ದಾರೆ. ಅಲ್ಲದೆ, ಬೆತ್ತಲೆ ಪೂಜೆ ಮಾಡಿಸಿದ್ದಾರೆ ಎಂದು ಆಪಾದನೆ ಮಾಡಿದ್ದಾಳೆ.

ಮಹಿಳೆಯ ಹೆಸರು ಶೋಭಾರಾಣಿ. ದೂರು ಸಹ ದಾಖಲಿಸಿದ್ದೇನೆ ಎಂದಿರುವ ಶೋಭಾ, ಕರ್ನೂಲ್​ ಎಸ್​ಪಿ ವಿಡಿಯೋಗೆ ಪ್ರತಿಕ್ರಿಯಿಸಬೇಕು ಮತ್ತು ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಎಚ್ಚರಿಕೆ ನೀಡಿದ್ದಾಳೆ. ಇದೀಗ ಸೆಲ್ಫಿ ವಿಡಿಯೋ ಆಂಧ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ವಿಡಿಯೋದಲ್ಲಿ ಶೋಭಾ ಕೆಲವು ಸೆನ್ಸೇಷನಲ್ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಸೆಲ್ಫಿ ವಿಡಿಯೋದಲ್ಲಿ ಏನಿದೆ?

ನನ್ನು ಹೆಸರು ಶೋಭಾ. ವಿಜಯವಾಡದ ಒನ್​ ಟೌನ್​ನಲ್ಲಿ ವಾಸಿಸುತ್ತಿದ್ದೇನೆ. ನಾನೊರ್ವ ಫ್ಯಾಶನ್​ ಡಿಸೈನರ್​. ಅಲ್ಲದೆ, ಲೆಕ್ಚರರ್​ ಸಹ ಆಗಿದ್ದೇನೆ. ನಾನು ಹಿಂದಿನ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಸಿದ್ದೆ. ರಾಜಕೀಯಕ್ಕೆ ಬಂದು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ ಬಳಿಕ ಶಾಸಕರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಕಳೆದೊಂದು ವರ್ಷದಿಂದ ಶಾಸಕರ ವರ್ತನೆಯಿಂದ ನನಗೆ ತೊಂದರೆಯಾಗುತ್ತಿದೆ. ಒನ್​ಟೌನ್​ ಸರ್ಕಲ್​ ಇನ್ಸ್​ಪೆಕ್ಟರ್​ ವೆಂಕಟರಮಣ ಅವರಿಗೆ ಹೇಳಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾನೇನು ತಪ್ಪು ಮಾಡದಿದ್ದರೂ ಮತ್ತು ಯಾವುದೇ ಸಾಕ್ಷಿಗಳು ಇಲ್ಲದಿದ್ದರೂ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಬೆದರಿಕೆ ಸಹ ಹಾಕುತ್ತಿದ್ದಾರೆ. ನನ್ನಿಂದ ಕಿರುಕುಳವನ್ನು ಸಹಿಸಲು ಆಗುತ್ತಿಲ್ಲ. ಎಂಟು ತಿಂಗಳ ಹಿಂದೆ ಎಫ್​ಐಆರ್​ ದಾಖಲಿಸಿದ್ದರು. ಆ ಸಮಯದಲ್ಲಿ ಗೃಹ ಸಚಿವರಿಗೆ ದೂರು ನೀಡಿ ಸಾಕ್ಷಿಗಳನ್ನು ಸಹ ಒದಗಿಸಿದ್ದೆ. ಇದೀಗ ಎರಡು ದಿನಗಳ ಹಿಂದೆ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ನಮ್ಮ ಮೇಲೆ ಅನೇಕ ಬಾರಿ ದಾಳಿ ಮಾಡಿದ್ದಾರೆ. ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ವಿಡಿಯೋದಲ್ಲಿ ಶೋಭಾ ಹೇಳಿದ್ದಾರೆ.

ಬೆತ್ತಲೆಯಾಗಿ ಪೂಜೆ 

ಶಾಸಕ ಹಫೀಜ್ ಖಾನ್ ಅವರ ಅನುಯಾಯಿಯೊಬ್ಬರು ನನಗೆ ವಾಟ್ಸ್​ಆ್ಯಪ್‌ನಲ್ಲಿ ಎಫ್‌ಐಆರ್ ಪ್ರತಿಗಳನ್ನು ಕಳುಹಿಸುತ್ತಿದ್ದಾರೆ. ನನಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ. ಮತ್ತೊಂದು ಗಂಭೀರ ಆರೋಪ ಮಾಡಿರುವ ಶೋಭಾ, ನನ್ನನ್ನು ಹೈದರಾಬಾದ್‌ಗೆ ಕರೆದೊಯ್ದು ಬೆತ್ತಲೆಯಾಗಿ ಪೂಜೆ ಮಾಡಿಸಿದ್ದಾರೆ ಎಂದು ಹೇಳಿದರು. ಶಾಸಕರ ಕಿರುಕುಳದಿಂದ ನನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಲಿದೆ. ಇನ್ನಾದರೂ ಮೇಲಧಿಕಾರಿಗಳು ಸ್ಪಂದಿಸದಿದ್ದರೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿಯಿಲ್ಲ. ಸಿಐ ವೆಂಕಟರಮಣ ಇನ್ನಷ್ಟು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಇವುಗಳಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಎಸ್ಪಿಗೆ ಕಳುಹಿಸಲಾಗಿದೆ ಎಂದು ಶೋಭಾರಾಣಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು 3 ಕೋಟಿ ರೂಪಾಯಿ ಹಣದ ವಿಚಾರವಾಗಿ ಶಾಸಕರ ಜತೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ನಾನು ತಪ್ಪಾಗಿ ನಡೆದುಕೊಂಡಿಲ್ಲ ಎಂದು ಶಾಸಕ ಹಫೀಜ್ ಖಾನ್ ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೇ ಶೋಭಾರಾಣಿ ಹೆಸರಲ್ಲಿ ಸೆಲ್ಫಿ ವಿಡಿಯೋವೊಂದು ವೈರಲ್ ಆಗಿದೆ. ಆದರೆ ಆರೋಪ ಮಾಡಿದ ಶೋಭಾರಾಣಿ ಹೆಚ್ಚಿನ ವಿಚಾರಣೆಗಾಗಿ ಇನ್ನೂ ಎಲ್ಲಿಯೂ ಲಭ್ಯವಾಗಿಲ್ಲ. ಸದ್ಯ ಈ ಪ್ರಕರಣ ಮಾತ್ರ ಭಾರೀ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net