ಡಿವೋರ್ಸ್​ ನೀಡದೇ ನಸ್ರುಲ್ಲನನ್ನು ಮದ್ವೆಯಾದ ಅಂಜುಗೆ ಶಾಕ್​ ಕೊಟ್ಟ ಪತಿ! ದಾಖಲಾಯ್ತು ಮೊದಲ ದೂರು

Anju Nasrulla
Published on

ನವದೆಹಲಿ: ಪಾಕಿಸ್ತಾನದ ಫೇಸ್​ಬುಕ್​ ಫ್ರೆಂಡ್​ನನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿರುವ ಭಾರತದ ಅಂಜು ವಿರುದ್ಧ ಆಕೆಯ ಪತಿ ಅರವಿಂದ್​ ದೂರು ದಾಖಲಿಸಿದ್ದಾರೆ. ಡಿವೋರ್ಸ್​ ನೀಡದೇ ಬೇರೊಬ್ಬ ವ್ಯಕ್ತಿಯ ಜತೆಗೆ ಮದುವೆ ಆಗಿರುವುದಲ್ಲದೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅರವಿಂದ್​ ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದ್ದು, ಅಂಜು ಮತ್ತು ಆಕೆಯ ಲವರ್​ ನಸ್ರುಲ್ಲ (29) ಹೆಸರನ್ನು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯ ಕುರಿತು ಅಂಜು ಮೇಲೆ ನಸ್ರುಲ್ಲ ಪರಿಣಾಮ ಬೀರಿದ್ದಾರೆ ಎಂದು ಅರವಿಂದ್​ ಆರೋಪಿಸಿದ್ದಾರೆ. ಭಿವಾಡಿಯ (ಅಲ್ವಾರ್) ಫೂಲ್‌ಬಾಗ್ ಪೊಲೀಸರು ಅರವಿಂದ್ ಹೇಳಿಕೆಯ ಆಧಾರದ ಮೇಲೆ ವರದಿಯನ್ನು ಬರೆದಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ದೂರು ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಈಗಾಗಲೇ ಮದುವೆಯಾಗಿದ್ದರೂ ಎರಡನೇ ಮದುವೆ ಆಗಿರುವುದು), 500 (ಮಾನನಷ್ಟ), 506 (ಕೊಲೆ ಬೆದರಿಕೆ) ಹಾಗೂ ಐಟಿ ಕಾಯ್ದೆ 43/66 (ಗೌಪ್ಯ ದತ್ತಾಂಶ ವಹಿವಾಟು) ಅಡಿಯಲ್ಲಿ ಅಂಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯವರೆಗೂ ಅಂಜು ಹಾಗೂ ನಸ್ರುಲ್ಲ ವಿರುದ್ಧ ಯಾವುದೇ ದೂರು ದಾಖಲಾಗಿರಲಿಲ್ಲ. ಇದೀಗ ಅಂಜು ಪತಿ ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರು ತನಿಖೆಯನ್ನು ಆರಂಭಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಪಾಕಿಸ್ತಾನಕ್ಕೆ ತೆರಳಿರುವ ಅಂಜು (34) ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿದ ಬಳಿಕ ಪ್ರಿಯಕರನನ್ನು ಅರಸಿ ಅಂಜು ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿ, ನಸ್ರುಲ್ಲನನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾಳೆ. ಅಂಜು ಇಸ್ಲಾಮ್​ಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ನಸ್ರುಲ್ಲಾನನ್ನು ಮದುವೆ ಆಗಿರುವುದಾಗಿ ಪಾಕಿಸ್ತಾನದ ದೀರ್​ನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕ್ರೈಸ್ತ ಧರ್ಮೀಯಳಾದ ಈಕೆ ಮತಾಂತರಗೊಂಡು ಫಾತಿಮಾ ಆಗಿ ಇಂದು ನಸ್ರುಲ್ಲಾನನ್ನೇ ಮದುವೆಯಾಗಿದ್ದಾಳೆ.

ಎರಡು ಮಕ್ಕಳ ತಾಯಿ

ಅಂಜುಗೆ ಅರವಿಂದ್​ ಜತೆ ಮೊದಲೇ ಮದುವೆಯಾಗಿದ್ದು, ದಂಪತಿಗೆ 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಜೈಪುರಕ್ಕೆ ಹೋಗಿ ಬರುವುದಾಗಿ ಪತಿ ಬಳಿ ಹೇಳಿ ಹೊರಟಿದ್ದ ಅಂಜು, ಬಳಿಕ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿ, ಇದೀಗ ಮದುವೆ ಸಹ ಆಗಿದ್ದಾಳೆ. ಇದೀಗ ಇಬ್ಬರು ಮಕ್ಕಳು ತಾಯಿಯಿಲ್ಲದೇ ಅನಾಥರಾಗಿದ್ದಾರೆ. ಡಿವೋರ್ಸ್​ ನೀಡದೆ ಮದುವೆ ಆಗಿರುವುದರಿಂದ ಅಂಜು ವಿರುದ್ಧ ಪತಿ ಅರವಿಂದ್​ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net