ಗೂಗಲ್​, ಆ್ಯಪಲ್​ ಸಂಸ್ಥೆಯ ಆಫರ್​ ರಿಜೆಕ್ಟ್​ ಮಾಡಿದ ಮಹಿಳೆ! ಈಕೆಯ ನಿರ್ಧಾರದ ಹಿಂದಿದೆ ರೋಚಕ ಕಾರಣ

ವಿಜಯವಾಣಿ - 2024-09-03T112216.705
Published on

ನವದೆಹಲಿ: ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು, ಲಕ್ಷಾಂತರ ರೂ. ಸಂಬಳ ಪಡೆಯಬೇಕು ಎಂಬದು ಕೋಟ್ಯಾಂತರ ಉದ್ಯೋಗಿಗಳ ಮಹಾದಾಸೆ. ಒಂದಷ್ಟು ವರ್ಷಗಳ ಕಾಲ ಉತ್ತಮ ಶಿಕ್ಷಣ ಪಡೆದು, ಬಯಸಿದ ಕೆಲಸಕ್ಕೆ ತಕ್ಕಂತ ಕೋರ್ಸ್​ಗಳನ್ನು ಮುಗಿಸಿ, ಹುಟ್ಟಿದ ಊರನ್ನು ಬಿಟ್ಟು, ಮತ್ಯಾವುದೋ ಊರಿಗೆ ಪಯಣ ಬೆಳೆಸಿ, ಅಲ್ಲಿನ ಹೆಸರಾಂತ ಸಂಸ್ಥೆಯಲ್ಲಿ ಕೆಲಸ ಪಡೆಯುವ ಕನಸು ಹೊತ್ತು ಬರುವ ಉದ್ಯೋಗಿಗಳ ಸಂಖ್ಯೆ ಊಹೆಗೂ ಮೀರಿದ್ದು ಎಂದೇ ಹೇಳಬಹುದು. ಕೆಲವರು ಒಳ್ಳೊಳ್ಳೆ ಅವಕಾಶಕ್ಕಾಗಿ ಸಿಕ್ಕ ಜಾಬ್​ ಮಾಡಿಕೊಂಡು, ತದನಂತರ ಬದಲಾವಣೆ ನೋಡುತ್ತಾರೆ. ಆದ್ರೆ, ಇಲ್ಲೊಬ್ಬರು ಮಹಿಳೆ, ತಾವು ಟೆಕ್ನಿಕಲಿ ಬಲವಾಗಿದ್ದು, ದೊಡ್ಡ ದೊಡ್ಡ ಕಂಪನಿಗೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿದ್ದರು ಸಹ ಯಾವ ಸಂಸ್ಥೆಗೂ ಹೋಗದ ತಮ್ಮ ವೃತ್ತಿಯ ದಿಕ್ಕನ್ನೇ ಬದಲಾಯಿಸಿಕೊಂಡಿದ್ದಾರೆ.

ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ಶಿಪ್ ಪಡೆದಿದ್ದ ಮಹಿಳೆಗೆ ವಿಶ್ವದಲ್ಲಿ ತಮ್ಮದು ಟಾಪ್​ ಬ್ಯ್ಯಾಂಡ್​ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಂದ ದೊಡ್ಡ ಹುದ್ದೆಗೆ ಆಫರ್​ ಒದಗಿಬಂದಿತ್ತು. ಆದ್ರೆ, ಅದನ್ನು ತಿರಸ್ಕರಿಸಿದ ಈಕೆ, ನಾನು ಇಂತಹ ಕೆಲಸವನ್ನು ಮಾಡಲು ಬಯಸುವುದಿಲ್ಲ. ನನ್ನ ಗುರಿ, ಹಾದಿಯೇ ಬೇರೆ ಇದೆ ಎಂದು ಯೋಚಿಸಿ, ಗೂಗಲ್, ಆ್ಯಪಲ್ ಆಫರ್​ ರಿಜೆಕ್ಟ್​ ಮಾಡಿ ಇದೀಗ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ "ಲಿಲ್ ಸ್ವೀಟ್ ಟ್ರೀಟ್" ಹೆಸರಿನ ಕ್ಯಾಂಡಿ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಇದು ಅನೇಕರಲ್ಲಿ ಹಾಸ್ಯ ಮೂಡಿಸಿದೆ.

ಈಕೆಯ ನಿರ್ಧಾರ ಕೇಳಿ ಭಾರೀ ಅಚ್ಚರಿ ವ್ಯಕ್ತಪಡಿಸಿದ ಹಲವರು, ಇದೆಂಥಾ ಬದಲಾವಣೆ? ಗೂಗಲ್, ಆ್ಯಪಲ್ ಏನು ಸಾಮಾನ್ಯ ಸಂಸ್ಥೆಯೇ? ಇಂತಹ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದ್ರೆ, ಅದನ್ನು ಬಿಟ್ಟು ಇದ್ಯಾವುದೋ ಕ್ಯಾಂಡಿ ಶಾಪ್ ಮಾಡ್ತೀನಿ ಎಂಬ ಹುಚ್ಚುಕಲ್ಪನೆ ಇವಳಿಗ್ಯಾಕೆ ಎಂದು ಪ್ರಾರಂಭದಲ್ಲಿ ಅನೇಕರು ಟೀಕಿಸಿ, ಮಾತನಾಡಿದ್ದರಂತೆ. ಇಂತಹ ಮಾತುಗಳಿಗೆ ಕಿವಿಗೊಡದ ಎಲಿ ರೋಸಾ, "ಒಮ್ಮೆ ನಾನು ಊಟಕ್ಕೆ ಹೋಗುವಾಗ ದಾರಿ ಮಧ್ಯೆ ಒಂದು ಮಳಿಗೆ ಖಾಲಿ ಇರುವುದನ್ನು ನೋಡಿದೆ. ಆಗ ನನ್ನ ತಲೆಗೆ ಬಂದದ್ದು, ನಾನು ಕಾಣುತ್ತಿದ್ದ ಕನಸಿನ ಕ್ಯಾಂಡಿ ಅಂಗಡಿ ತೆರೆಯಲು ಇದು ಹೇಳಿ ಮಾಡಿಸಿದ ಜಾಗ ಅನಿಸಿತು. ಹೀಗಾಗಿಯೇ ದೊಡ್ಡ ಆಫರ್​ ಬಿಟ್ಟು ಇತ್ತ ಮುಖಮಾಡಿದೆ" ಎಂದರು.

"ನನ್ನಲ್ಲಿ ಮುಂಚಿನಿಂದಲೂ ಉದ್ಯಮಶೀಲತೆ ಗುಣಗಳಿದ್ದವು. ಆದ್ರೆ, ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ನನ್ನ ಈ ಹಾದಿ ಬದಲಾವಣೆಗೆ ನನ್ನಮ್ಮ ಕೂಡ ಕಾರಣ. ಈ ಯೋಜನೆ ಬಗ್ಗೆ ಅವರೊಂದಿಗೆ ಚರ್ಚಿಸಿದಾಗ ಅವರು ಮುನ್ನುಗ್ಗು ಎಂದೇ ಬೆನ್ನುತಟ್ಟಿದರು. ಕ್ಯಾಂಡಿ ಶಾಪ್ ತೆರೆದಿದ್ದು ನಿಜಕ್ಕೂ ಖುಷಿ ತಂದಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಲಭ್ಯವಾಗುವ ವಿಶೇಷ ಬಗೆಯ ಹಾಗೂ ತರಹೇವಾರಿ ಕ್ಯಾಂಡಿ ಪದಾರ್ಥಗಳು ನಮ್ಮಲ್ಲಿ ಸಿಗುತ್ತದೆ. ಈ ತಿನಿಸುಗಳನ್ನು ಜನರಿಗೆ ಮಾರಾಟ ಮಾಡುವುದರಿಂದ ವಿವಿಧ ಸಂಸ್ಕೃತಿ, ಖುಷಿ ನೋಡುತ್ತಿದ್ದೇನೆ. ಆನ್​ಲೈನ್ ಮತ್ತು ಆಫ್​ಲೈನ್​ ಎರಡರಲ್ಲೂ ಈ ಉದ್ಯಮವನ್ನು ನಾನು ಮತ್ತು ನನ್ನ ಪತಿ ನಡೆಸುತ್ತಿದ್ದೇವೆ" ಎಂದು ಎಲಿ ರೋಸ್​ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net