

ಇಸ್ಲಾಮಾಬಾದ್: ದುಡ್ಡಿಗಾಗಿ ಏನು ಬೇಕಾದರೂ ಮಾಡುವ ಜನರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ದುಡ್ಡಿಗಾಗಿ ಸತ್ತೇ ಹೋಗಿದ್ದಾಳೆ. ಹಾಗೆ ಸತ್ತ ಅವಳು ಸತ್ತ ಮೇಲೆ ಐದು ದೇಶಗಳಿಗೆ 10 ಬಾರಿ ಪ್ರಯಾಣ ಬೆಳೆಸಿದ್ದಾಳೆ. ಸತ್ತವರು ಪ್ರಯಾಣಿಸುವುದು ಹೇಗೆ? ಭೂತವಾಗಿ ಪ್ರಯಾಣಿಸಿದಳಾ? ಎನ್ನುವುದಕ್ಕೆ ಇಲ್ಲಿದೆ ರೋಚಕ ಕಥೆ.
ಆಕೆ ಪಾಕಿಸ್ತಾನ ಮೂಲದ ಮಹಿಳೆ. ಹೆಸರು ಸೀಮಾ ಖಾರ್ಬೆ. ವಿದೇಶಿ ಸಹವಾಸ ಹೊಂದಿದ್ದ ಆಕೆ 2011ರಲ್ಲಿಯೇ ಸತ್ತಿದ್ದಾಳೆ. ಹಾಗಂತ ಡೆತ್ ಸರ್ಟಿಫಿಕೇಟ್ ಪ್ರಿಂಟ್ ಆಗಿದೆ. ಆಕೆಯನ್ನು ಅಂತ್ಯ ಸಂಸ್ಕಾರ ಮಾಡಿರುವುದಾಗಿಯೂ ವರದಿಯಾಗಿದೆ. ಆಕೆಯ ಡೆತ್ ಸರ್ಟಿಫಿಕೇಟ್ ಮುಂದಿಟ್ಟುಕೊಂಡು ಮಕ್ಕಳು 11 ಕೋಟಿ ರೂಪಾಯಿ ಇನ್ಶುರೆನ್ಸ್ ಹಣವನ್ನೂ ಪಡೆದುಕೊಂಡಿದ್ದಾರೆ.
ಹೀಗೆ ಸತ್ತ ಮಹಿಳೆಯ ಬಗ್ಗೆ ಅಮೆರಿಕ ಇತ್ತೀಚೆಗೆ ಪಾಕಿಸ್ತಾನಕ್ಕೆ ದೂರು ನೀಡಿದೆ. ಈಗಾಗಲೇ ಸತ್ತಿದ್ದಾಳೆ ಎಂದು ದೃಢೀಕರಣವಾಗಿರುವ ಮಹಿಳೆ ನಮ್ಮ ದೇಶಕ್ಕೆ ಬಂದಿದ್ದಾಳೆ ಎಂದು ಅಮೆರಿಕ ದೂರಿನಲ್ಲಿ ಹೇಳಿದೆ. ಬಳಿಕ ಈ ವಿಚಾರವಾಗಿ ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ.
2011ರಲ್ಲಿ ಮಹಿಳೆ ಸತ್ತೇ ಇರಲಿಲ್ಲ. ಹಣದ ಆಸೆಗಾಗಿ ಆಕೆಯೇ ಕೆಲವು ಅಧಿಕಾರಿಗಳು ಮತ್ತು ವೈದ್ಯರನ್ನು ಹಿಡಿದು ಮರಣ ಪ್ರಮಾಣ ಮಾಡಿಸಿಕೊಂಡಿದ್ದಾಳೆ. ಅಮ್ಮ ಸತ್ತಿದ್ದಾಳೆಂದು ಹೇಳಿ ಮಕ್ಕಳಿಗೆ ಇನ್ಶುರೆನ್ಸ್ ಹಣ ಬರುವಂತೆ ಮಾಡಿದ್ದಾಳೆ. ಜೀವವಿಮೆ ಸಂಸ್ಥೆಗೆ ಬರೋಬ್ಬರಿ 11 ಕೋಟಿ ರೂಪಾಯಿ ಮೋಸ ಮಾಡಿದ್ದಾಳೆ. (ಏಜೆನ್ಸೀಸ್)