ಮಹಿಳೆ ಮೇಲೆ ಪಿಟ್​ಬುಲ್​ ದಾಳಿ; ದೂರು ದಾಖಲಾಗುತ್ತಿದ್ದಂತೆ ಮಾಲೀಕ ಪರಾರಿ

Pitbull Attack
Published on

ನವದೆಹಲಿ: ಅಪಾಯಕಾರಿ ಶ್ವಾನ ತಳಿ ಎಂದೇ ಕುಖ್ಯಾತಿ ಪಡೆದಿರುವ ಪಿಟ್​ಬುಲ್​ ನಾಯಿಯು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಸ್ವರೂಪ್​ನಗರದಲ್ಲಿ ನಡೆದಿದೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಾಲೀಕ ತಲೆಮಾರಿಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ದೂರುದಾರೆ ರಿಯಾ ದೇವಿ ಅವರ ಮನೆ ಮುಂಭಾಗ ನೆರೆ ಮನೆಯವರು ಸಾಕಿದ್ದ ಪಿಟ್​ಬುಲ್​ ತಳಿಯ ನಾಯಿ ಪ್ರತಿದಿನ ಗಲೀಜು ಮಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ನೆರೆಮನೆಯವರಿಗೆ ನಾಯಿ ಪ್ರತಿನಿತ್ಯ ತಮ್ಮ ಮನೆ ಮುಂದೆ ಗಲೀಜು ಮಾಡುತ್ತಿದ್ದು, ಹೊರ ಬಿಡದಂತೆ ಹೇಳಿದ್ದಾರೆ.

ರಿಯಾ ದೇವಿ ಅವರು ಆಡಿದ ಮಾತುಗಳಿಂದ ರೊಚ್ಚಿಗೆದ್ದ ಶ್ವಾನದ ಮಾಲೀಕ ಏಕಾಏಕಿ ಆಕೆಯ ಜತೆ ವಾಗ್ವಾದ ನಡೆಸಿದ್ದು, ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆತನ ನಾಯಿ ಮಹಿಳೆ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಆರೋಪಿ ಶ್ವಾನದ ಮಾಲೀಕನ ವಿರುದ್ಧ ಭಾರತ ದಂಡ ಸಂಹಿತೆ (IPC Section) 289 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ತಲೆಮಾರಿಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net