ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

Ventilator
Published on

ನವದೆಹಲಿ: ತೀವ್ರ ನಿಗಾ ಘಟಕದಲ್ಲಿನ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗುತ್ತಿತ್ತು ಎಂದು ಬೇಸತ್ತ ವೃದ್ಧೆಯೊಬ್ಬಳು ಅದನ್ನು ಆಫ್ ಮಾಡಿದ ಪರಿಣಾಮವಾಗಿ ರೋಗಿ ಸಾವಿಗೀಡಾಗಿದ್ದು, 72 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಬ್ಬರೂ ರೋಗಿಗಳು ಒಂದೇ ವಾರ್ಡ್​ನಲ್ಲಿದ್ದು, ಆಗ ಇನ್ನೊಬ್ಬಾಕೆಗೆ ಅಳವಡಿಸಿದ್ದ ವೆಂಟಿಲೇಟರ್ ಶಬ್ದಕ್ಕೆ ಬೇಸತ್ತು ಈಕೆ ಅದನ್ನು ಆಫ್ ಮಾಡಿದ್ದಳು. ಜರ್ಮನಿಯ ಮ್ಯಾನ್ಹೀಮ್​ನ ಆಸ್ಪತ್ರೆಯೊಂದರಲ್ಲಿ ನ. 29ರಂದು ಈ ಪ್ರಕರಣ ನಡೆದಿದೆ.

ರೋಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಐಸಿಯು ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಅನಿಸುತ್ತಿತ್ತು ಎಂದು ಆಕೆ ತಿಳಿಸಿದ್ದಾರೆ. ಅದಾಗ್ಯೂ ರೋಗಿಗೆ ವೆಂಟಿಲೇಟರ್ ಅಗತ್ಯವಿದೆ ಎಂದು ಇನ್ನೊಮ್ಮೆ ಆನ್ ಮಾಡಿದ್ದಾಗಲೂ ಆಕೆ ನಂತರ ಅದನ್ನು ಆಫ್ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸಾವಿಗೀಡಾದ ರೋಗಿ ಅಪಾಯದಲ್ಲಿ ಇರದಿದ್ದರೂ ವೆಂಟಿಲೇಟರ್ ಅಗತ್ಯವಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಬಳಿಕ ಜೈಲಿಗೆ ಕಳುಹಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net