ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

Pasta
Published on

ನವದೆಹಲಿ: ಕಂಪನಿಗಳು ನೀಡಿದ ಭರವಸೆಯಂತೆ, ಜಾಹೀರಾತುಗಳಲ್ಲಿ ಹೇಳಿದಂತೆ ಉತ್ಪನ್ನಗಳು ಇರದಿರುವುದಕ್ಕೆ ಕೆಲವರು ಕೇಸು ಹಾಕಿದ ಉದಾಹರಣೆಗಳಿವೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ರೆಡಿ ಆಗಿಲ್ಲವೆಂದು ಆ ಕಂಪನಿ ವಿರುದ್ಧ ಕೇಸು ದಾಖಲಿಸಿದ್ದಾಳೆ.

ಅಮೆರಿಕದ ಕ್ರಾಫ್ಟ್​ ಹೀಂಜ್​ ಕಂಪನಿಯ ವಿರುದ್ಧ ಫ್ಲೋರಿಡದ ಯುವತಿ ಅಮಾಂಡಾ ರಮಿರೆಜ್​ ಹೀಗೊಂದು ಕೇಸ್ ದಾಖಲಿಸಿರುವುದು ಗಮನ ಸೆಳೆದಿದೆ. ಕಂಪನಿ ಹೇಳಿರುವಂತೆ ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗುತ್ತಿಲ್ಲ ಎಂದು ಆಕೆ 5 ಮಿಲಿಯನ್ ಡಾಲರ್​ (40 ಕೋಟಿ ರೂ.ಗೂ ಅಧಿಕ) ಮೊತ್ತದ ಕೇಸು ದಾಖಲಿಸಿದ್ದಾಳೆ.

ಕ್ರಾಫ್ಟ್ ಹೀಂಜ್ ಕಂಪನಿ ತಿಳಿಸಿದಂತೆ ವೆಲ್ವೀಟಾ ಪಾಸ್ತಾ ಮೂರೂವರೆ ನಿಮಿಷದಲ್ಲಿ ಸಿದ್ಧವಾಗುತ್ತಿಲ್ಲ, ಇದು ಫೆಡರಲ್ ಕಾನೂನು ಉಲ್ಲಂಘನೆ ಎಂದು ಯುವತಿ ನ. 18ರಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಪ್ಯಾಕೆಟ್​ನಲ್ಲಿ ನಮೂದಿಸಿರುವ ರೀತಿಯಲ್ಲೇ ತಯಾರಿಸಿದರೂ ಮೂರೂವರೆ ನಿಮಿಷದಲ್ಲಿ ಅದು ತಯಾರಾಗುತ್ತಿಲ್ಲ ಎಂದು ಈಕೆ ಯುಎಸ್​ ಡಿಸ್ಟ್ರಿಕ್ಟ್ ಕೋರ್ಟ್​ ಫಾರ್ ದ ಸದರ್ನ್ ಡಿಸ್ಟ್ರಿಕ್ಟ್ ಆಫ್ ಫ್ಲೋರಿಡದಲ್ಲಿ ಕೇಸು ದಾಖಲಿಸಿದ್ದಾಳೆ.

2022ರ ಅಕ್ಟೋಬರ್​-ನವೆಂಬರ್ ಮಧ್ಯದಲ್ಲಿ 10.99 ಡಾಲರ್ ಬೆಲೆಯ ಪಾಸ್ತಾ ಖರೀದಿಸಿದ್ದು, ನಷ್ಟದ ರೂಪದಲ್ಲಿ ನನಗೆ 5 ಮಿಲಿಯನ್ ಡಾಲರ್ ಕೊಡಬೇಕಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಇದೊಂದು ಕ್ಷುಲ್ಲಕ ಮೊಕದ್ದಮೆಯಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಕಂಪನಿ ಹೇಳಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net