

Divorce : ವಿವಾಹೇತರ ಸಂಬಂಧಗಳು ಉಂಟುಮಾಡುವ ಸಮಸ್ಯೆಗಳ ಬಗ್ಗೆ ಜಗತ್ತಿನಾದ್ಯಂತ ಅನೇಕ ವರದಿಗಳಾಗಿವೆ. ಕೊಲೆಯಂತಹ ಕ್ರಿಮಿನಲ್ ಅಪರಾಧಗಳಿಗೂ ಈ ಸಂಬಂಧ ಕಾರಣವಾಗುತ್ತವೆ. ಸಾಮಾನ್ಯ ಜನರು ಕೂಡ ಊಹಿಸಲೂ ಸಾಧ್ಯವಾಗದ ಸಂಗತಿಗಳು ವಿವಾಹೇತರ ಸಂಬಂಧದ ಸಂದರ್ಭಗಳಲ್ಲಿ ನಡೆಯುತ್ತವೆ. ಅಂಥದ್ದೇ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ನಡೆದಿರುವುದು ಚೀನಾದಲ್ಲಿ. 2013ರಲ್ಲಿ ಯಾನ್ ಎಂಬಾತ ಯಾಂಗ್ ಎಂಬಾಕೆಯನ್ನು ಮದುವೆಯಾಗಿದ್ದ. 2022ರಲ್ಲಿ ದಂಪತಿಗೆ ಗಂಡು ಮಗುವಾಯಿತು. ಇದಾದ ನಂತರ ಯಾನ್ ಮತ್ತೊಂದು ಯುವತಿ ಶಿ ಎಂಬಾಕೆಯನ್ನು ಪ್ರೀತಿಸಲು ಶುರು ಮಾಡಿದರು. ಅಲ್ಲದೆ, ಇಬ್ಬರು ಮದುವೆಯಾಗಲು ಸಹ ಒಪ್ಪಿಕೊಂಡರು. ಯಾಂಗ್ನನ್ನು ಬಿಟ್ಟುಬರಲು ಶಿ ಹೇಳಿದಳು.
ಅಲ್ಲದೆ, ಶಿ ತನ್ನ ಪ್ರಿಯಕರನ ಪತ್ನಿ ಯಾಂಗ್ಳನ್ನು ಖುದ್ದಾಗಿ ಭೇಟಿಯಾಗಿ ಆಕೆಗೆ 1.2 ಮಿಲಿಯನ್ ಯುವಾನ್ (1.39 ಕೋಟಿ ರೂ.) ನೀಡಿ ವಿಚ್ಛೇದನ ತೆಗೆದುಕೊಳ್ಳುವಂತೆ ಹೇಳಿದ್ದಳು. ಇದಕ್ಕೆ ಆರಂಭದಲ್ಲಿ ಯಾಂಗ್ ಕೂಡ ಒಪ್ಪಿಗೆ ಸೂಚಿಸಿದ್ದಳು. ಆದರೆ, ಹಣ ಪಡೆದ ಬಳಿಕ ವಿಚ್ಛೇದನಕ್ಕೆ ಸಿದ್ಧವಿಲ್ಲ ಎಂದು ಯಾಂಗ್ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಶಿಯೆ, ತನ್ನ ಹಣ ಮರಳಿ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು.
ಹಣ ಸ್ವೀಕರಿಸಿದ ಒಂದು ವರ್ಷದ ನಂತರ ಯಾಂಗ್, ತಮ್ಮ ಸಂಬಂಧವನ್ನು ಕೊನೆಗೊಳಿಸಲು ಸಿದ್ಧವಾಗಿಲ್ಲ ಎಂದು ಘೋಷಿಸಿದಳು. ಕೋಪಗೊಂಡ ಶಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಆದರೆ, ಶಿ ನ್ಯಾಯಾಲಯದಲ್ಲಿ ಹಿನ್ನಡೆ ಎದುರಿಸಿದ್ದಾಳೆ.
ಶಿಯ ಬೇಡಿಕೆ ಮತ್ತು ಹಣ ನೀಡಿರುವುದು ಸಾಮಾಜಿಕ ಸಭ್ಯತೆಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕಾನೂನುಬದ್ಧವಾಗಿ ವಿವಾಹವಾದವರ ಕೌಟುಂಬಿಕ ಜೀವನವನ್ನು ಹಣ ಕೊಟ್ಟು ನಾಶಪಡಿಸುವ ಶಿಯ ಪ್ರಯತ್ನವನ್ನು ನ್ಯಾಯಾಲಯ ಗಮನಿಸಿದೆ. ಅಲ್ಲದೆ, ಹಣವನ್ನು ಹಿಂತಿರುಗಿಸಬೇಕಾಗಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)