ವಿಜಯ್​-ತ್ರಿಷಾ ಒಟ್ಟಿಗಿರುವ ಫೋಟೋ-ವಿಡಿಯೋ ಸೋರಿಕೆ: ಸ್ಫೋಟಕ ಹೇಳಿಕೆ ನೀಡಿದ ಅಣ್ಣಾಮಲೈ​! K Annamalai

K Annamalai
Published on

K Annamalai : ನಟ ಹಾಗೂ ರಾಜಕಾರಣಿ ವಿಜಯ್ ಮತ್ತು ಬಹುಭಾಷಾ ನಟಿ ತ್ರಿಷಾ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳನ್ನು ಸೋರಿಕೆ ಮಾಡಿರುವುದರ ಹಿಂದೆ ರಾಜ್ಯದ ಗುಪ್ತಚರ ದಳದ ಕೈವಾಡವಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದಾರೆ.

ವಿಜಯ್ ಮತ್ತು ತ್ರಿಷಾ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಖಾಸಗಿ ಭದ್ರತಾ ತಪಾಸಣೆಗೆ ಒಳಗಾದಾಗ ಅವರ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿಯಲಾಗಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.

ಡಿಸೆಂಬರ್​ 12 ರಂದು ಗೋವಾದಲ್ಲಿ ನಟಿ ಕೀರ್ತಿ ಸುರೇಶ್ ಅವರ ಮದುವೆ ಸಮಾರಂಭ ನಡೆಯಿತು. ಈ ವಿವಾಹ ಸಮಾರಂಭದಲ್ಲಿ ವಿಜಯ್ ಮತ್ತು ತ್ರಿಷಾ ಭಾಗವಹಿಸಿದ್ದರು. ಇಬ್ಬರು ಖಾಸಗಿ ವಿಮಾನದಲ್ಲಿ ಗೋವಾಗೆ ಪ್ರಯಾಣಿಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೇ ಸಂದರ್ಭದಲ್ಲಿ ವಿಜಯ್​ ಪತ್ನಿ ಸಂಗೀತಾ ಅವರನ್ನು ಉಲ್ಲೇಖಿಸಿ ಜಸ್ಟೀಸ್​ ಫಾರ್​ ಸಂಗೀತಾ ಎಂಬ ಹ್ಯಾಶ್​ಟ್ಯಾಗ್​ ಜಾಲತಾಣದಲ್ಲಿ ಹರಿದಾಡಿತ್ತು. ವಿಜಯ್​ ಮತ್ತು ತ್ರಿಷಾ ನಡುವೆ ಏನೋ ನಡೆಯುತ್ತಿದೆ ಎಂಬ ಚರ್ಚೆಗಳು ನಡೆದೆವು.

ಇನ್ನು ಫೋಟೋಗಳು ಸೋರಿಕೆ ಆಗಿರುವುದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವಾರ ಗೋವಾದಲ್ಲಿ ಮದುವೆಗೆ ಹೋಗಿದ್ದರು. ಗೇಟ್ ನಂಬರ್ 6ರಿಂದ ಖಾಸಗಿ ವಿಮಾನದಲ್ಲಿ ತೆರಳಿದ್ದರು. ಈ ವೇಳೆ ಅವರ ಖಾಸಗಿ ಫೋಟೋಗಳು ಹೇಗೆ ಲೀಕ್ ಆದವು? ಮದುವೆ ಸಮಾರಂಭಕ್ಕೆ ಯಾರು ಬೇಕಾದರೂ ಹೋಗಬಹುದು. ಅದು ಅವರ ವೈಯಕ್ತಿಕ ವಿಚಾರ. ಆದರೆ ಆ ಫೋಟೋಗಳನ್ನು ಬಿಡುಗಡೆ ಮಾಡಿದವರು ಯಾರು? ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ಡಿಎಂಕೆಯ ಸಾಮಾಜಿಕ ಮಾಧ್ಯಮ ಸೆಲ್‌ಗೆ ಈ ಫೋಟೋಗಳನ್ನು ಯಾರು ನೀಡಿದ್ದಾರೆ. ಇದರ ಹಿಂದೆ ರಾಜ್ಯ ಗುಪ್ತಚರ ಇಲಾಖೆ ಕೈವಾಡ ಇದೆ ಎಂದ ಅಣ್ಣಾಮಲೈ, ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಎಫ್‌ಐಆರ್ ದಾಖಲಿಸುವುದಕ್ಕಾಗಿ ಈ ಫೋಟೋಗಳನ್ನು ಯಾರು ತೆಗೆದಿದ್ದಾರೆ ಎಂಬುದನ್ನು ಸಚಿವಾಲಯವು ಪತ್ತೆ ಮಾಡಬೇಕಾಗಿದೆ ಎಂದು ಅಣ್ಣಾಮಲೈ ಹೇಳಿದರು. ಅಲ್ಲದೆ, ಹೊರಗೆ ಹೋದವರ ಫೋಟೋ ತೆಗೆದು ಡಿಎಂಕೆಗೆ ಕೊಡುವುದು ಬುದ್ಧಿವಂತಿಕೆಯೇ? ಎಂದು ಪ್ರಶ್ನಿಸಿದರು.

ಬೇರೆಯವರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಡಿಎಂಕೆಗೆ ಇಲ್ಲ. ಇದು ನಿಮ್ಮ ಡಿಎಂಕೆಯ ರಾಜಕೀಯ ಸಂಸ್ಕೃತಿಯೇ? ಡಿಎಂಕೆ ಜನರು ಇದನ್ನು ಹೀಗೆ ಗೌರವಿಸುತ್ತಾರೆಯೇ? ಜನರು ಎಲ್ಲಿ ಬೇಕಾದರೂ ಹೋಗುತ್ತಾರೆ. ವಿಜಯ್​ ಮತ್ತು ತ್ರಿಷಾ ಮದುವೆಗೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ನೀವು ಆ ಫೋಟೋಗಳನ್ನು ತೆಗೆದುಕೊಂಡು ಸೋರಿಕೆ ಮಾಡುತ್ತೀರಿ. ಇದು ಸರಿಯೇ ಎಂದು ಪ್ರಶ್ನಿಸುವ ಮೂಲಕ ಅಣ್ಣಾಮಲೈ ಡಿಎಂಕೆ ವಿರುದ್ಧ ಟೀಕಾಪ್ರಹಾರ ನಡೆಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net