ಟೀಮ್​ ಇಂಡಿಯಾ ಪಾಲಿಗೆ ಡಿ.19 ಬಹಳ ವಿಶೇಷ ದಿನ: ವಿರಾಟ್​ ಕೊಹ್ಲಿಯಂತೂ ಈ ದಿನ ಮರೆಯಲ್ಲ! Team India

Team India
Published on

Team India : ಡಿಸೆಂಬರ್ 19 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬಹಳ ವಿಶೇಷ ದಿನವಾಗಿದೆ. ಏಕೆಂದರೆ, ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಈ ದಿನ ಭಾರತ ತಂಡ ಎರಡು ವಿಭಿನ್ನ ದಾಖಲೆಗಳನ್ನು ದಾಖಲಿಸಿದೆ.

2016ರಲ್ಲಿ ಇದೇ ದಿನ ಟೀಮ್​ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಇದಾದ ನಾಲ್ಕು ವರ್ಷಗಳ ನಂತರ ಅಂದರೆ, 2020ರಲ್ಲಿ ಇದೇ ದಿನ ಮತ್ತೊಮ್ಮೆ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿತು.

2016, ಡಿಸೆಂಬರ್ 19ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾ, ಇಂಗ್ಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 759 ರನ್ ಗಳಿಸಿತು. ಇದು ಈಗಲೂ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ ಒಂದೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿತ್ತು ಮತ್ತು 75 ರನ್‌ಗಳ ಜಯ ಸಾಧಿಸಿತ್ತು.

ಇದಾದ ನಾಲ್ಕು ವರ್ಷಗಳ ನಂತರ, 2020ರ ಡಿಸೆಂಬರ್ 19 ರಂದು, ಭಾರತವು ಟೆಸ್ಟ್‌ ಪಂದ್ಯದಲ್ಲಿ ತಮ್ಮ ಕಡಿಮೆ ಸ್ಕೋರ್ ದಾಖಲಿಸಿತು. ಅಡಿಲೇಡ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ 36 ರನ್​ಗಳಿಗೆ ಆಲೌಟ್ ಆಗಿತ್ತು. ಇದು ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಆ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ನಲ್ಲಿ ಯಾರೂ ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಮಯಾಂಕ್ ಅಗರ್ವಾಲ್ ಅವರ 9 ರನ್ ಗರಿಷ್ಠ ಸ್ಕೋರ್ ಆಗಿತ್ತು.

ಟೆಸ್ಟ್‌ನಲ್ಲಿ ಭಾರತದ ಅತ್ಯಧಿಕ ಮತ್ತು ಕಡಿಮೆ ಸ್ಕೋರ್‌ಗಳು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬಂದವು ಎಂಬುದು ಗಮನಾರ್ಹ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net