

Ashwin Retirement : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ (ಬಾರ್ಡರ್ ಗವಾಸ್ಕರ್ ಟ್ರೋಫಿ) ಬಳಿಕ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು ಗೊತ್ತೇ ಇದೆ. ಅಶ್ವಿನ್ ಅವರು ದಿಢೀರ್ ವಿದಾಯ ಹೇಳಿದ್ದಕ್ಕೆ ಭಾರತೀಯ ಅಭಿಮಾನಿಗಳೆಲ್ಲ ಬೇಸರಗೊಂಡಿರುವಾಗಲೇ ಭಾರತದ ಕ್ರಿಕೆಟ್ ದಿಗ್ಗಜ ಹಾಗೂ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ಅಶ್ವಿನ್ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಸರಣಿ ಮಧ್ಯದಲ್ಲಿ ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಅಶ್ವಿನ್ ನಿವೃತ್ತಿ ಹೊಂದಲು ಬಯಸಿದ್ದರೆ ಸರಣಿ ಮುಗಿಯುವವರೆಗೆ ಕಾಯಬೇಕಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ. ಅಶ್ವಿನ್ ಅವರ ಹಠಾತ್ ನಿವೃತ್ತಿ ಘೋಷಣೆಯು ಟೀಮ್ ಇಂಡಿಯಾದ ಉಳಿದ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಟೆಸ್ಟ್ ಸರಣಿ 1-1ರ ಸಮಬಲದಲ್ಲಿದೆ. ಇಂತಹ ಹಂತದಲ್ಲಿ ಅಶ್ವಿನ್ ನಿವೃತ್ತಿ ಘೋಷಣೆ ಮಾಡಿರುವುದು ಸರಣಿಯ ಫಲಿತಾಂಶವನ್ನೇ ಬದಲಿಸಬಹುದು ಎಂದು ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ಸರಣಿಯ ಮಧ್ಯದಲ್ಲಿ ಅಶ್ವಿನ್ ನಿವೃತ್ತಿಯಾಗಿರುವುದರಿಂದ ಭಾರತ ಉಳಿದ ಎರಡು ಪಂದ್ಯಗಳಿಗೆ ಆಟಗಾರನನ್ನು ಕಳೆದುಕೊಳ್ಳಲಿದೆ. ಈ ಹಿಂದೆ ಎಂಎಸ್ ಧೋನಿ ಕೂಡ ಸರಣಿಯ ಮಧ್ಯದಲ್ಲಿ ನಿವೃತ್ತಿಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಸಿಡ್ನಿಯಲ್ಲಿ ನಡೆಯಲಿದ್ದು, ಅಲ್ಲಿ ಅಶ್ವಿನ್ಗೆ ತನ್ನ ಪ್ರಭಾವ ಬೀರಲು ಅವಕಾಶವಿತ್ತು. ಸಿಡ್ನಿ ಪಿಚ್ ಸ್ಪಿನ್ನರ್ಗಳನ್ನು ಬೆಂಬಲಿಸಿರುವ ಇತಿಹಾಸ ಹೊಂದಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್ ಅವರ ನಿರ್ಧಾರವನ್ನು ಟೀಕಿಸುವ ಭರದಲ್ಲಿ ಗವಾಸ್ಕರ್ ಮತ್ತೊಂದು ಪ್ರಮುಖ ಕಾಮೆಂಟ್ ಮಾಡಿದ್ದಾರೆ. ಉಳಿದ ಸರಣಿಯಲ್ಲಿ ಅಶ್ವಿನ್ಗಿಂತ ವಾಷಿಂಗ್ಟನ್ ಸುಂದರ್ ಮುಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಬಾರ್ಡರ್ ಗವಾಸ್ಕರ್ ಟ್ರೋಫಿ 2024-25 ರ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಮೆಲ್ಬೋರ್ನ್ನಲ್ಲಿ ಪ್ರಾರಂಭವಾಗಲಿದೆ. ಡಬ್ಲ್ಯುಟಿಸಿ ಫೈನಲ್ ತಲುಪಲು ಟೀಮ್ ಇಂಡಿಯಾ ಆಸೀಸ್ ವಿರುದ್ಧ ಮುಂದಿನ ಎರಡೂ ಟೆಸ್ಟ್ಗಳನ್ನು ಗೆಲ್ಲಬೇಕಾಗಿದೆ. ಬ್ರಿಸ್ಬೇಸ್ನಲ್ಲಿ ನಡೆದ ಮೂರನೇ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿದ್ದು ಗೊತ್ತೇ ಇದೆ. (ಏಜೆನ್ಸೀಸ್)