

Hidden camera : ಶಿಕ್ಷಕರ ಟಾಯ್ಲೆಟ್ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಶಾಲಾ ನಿರ್ದೇಶಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 70ರಲ್ಲಿರುವ ಲರ್ನ್ ವಿತ್ ಫನ್ ಎಂಬ ಪ್ಲೇ ಸ್ಕೂಲ್ನಲ್ಲಿ ನಡೆದಿದೆ.
ಬಂಧಿತನನ್ನು ನವೀಶ್ ಸಹಾಯ್ ಎಂದು ಗುರುತಿಸಲಾಗಿದೆ. ಟಾಯ್ಲೆಟ್ನ ಬಲ್ಬ್ ಹೋಲ್ಡರ್ ಒಳಗೆ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ನಲ್ಲಿ ಟಾಯ್ಲೆಟ್ ಒಳಗಿನ ದೃಶ್ಯಾವಳಿಗಳನ್ನು ಲೈವ್ ಆಗಿ ನೋಡುವ ರೀತಿಯಲ್ಲಿ ಸೆಟಪ್ ಮಾಡಲಾಗಿತ್ತು.
ಟಾಯ್ಲೆಟ್ನಲ್ಲಿದ್ದ ರಹಸ್ಯ ಕ್ಯಾಮೆರಾವನ್ನು ಶಾಲೆಯ ಶಿಕ್ಷಕರೊಬ್ಬರು ಪತ್ತೆ ಮಾಡಿದ್ದಾರೆ. ಬಲ್ಬ್ ಹೋಲ್ಡರ್‌ನಲ್ಲಿ ವಿಚಿತ್ರವಾದ ಮಂದ ಬೆಳಕನ್ನು ಗಮನಿಸಿದ ಶಿಕ್ಷಕಿ ತಪಾಸಣೆ ನಡೆಸಿದಾಗ ಕ್ಯಾಮೆರಾ ಪತ್ತೆಯಾಗಿದೆ. ಈ ವಿಚಾರವನ್ನು ನಿರ್ದೇಶಕ ನವೀಶ್ ಸಹಾಯ್ ಮತ್ತು ಕೋಆರ್ಡಿನೇಟರ್ ಪಾರುಲ್ಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಅನುಮಾನಗೊಂಡ ಶಿಕ್ಷಕಿ ನೋಯ್ಡಾದ ಕೇಂದ್ರ ಉಪ ಆಯುಕ್ತ ಶಕ್ತಿ ಮೋಹನ್ ಅವಸ್ತಿ ಅವರಿಗೆ ದೂರು ಸಲ್ಲಿಸಿದ್ದರು.
ತನಿಖೆಯ ನಂತರ ಪೊಲೀಸರು ನವೀಶ್ ಸಹಾಯ್ನನ್ನು ಬಂಧಿಸಿದ್ದಾರೆ. ದೃಶ್ಯಗಳನ್ನು ರೆಕಾರ್ಡ್ ಮಾಡದೆಯೇ ಕ್ಯಾಮೆರಾವನ್ನು ಲೈವ್ ಸ್ಟ್ರೀಮಿಂಗ್ಗೆ ಬಳಸಿದ್ದಾರೆಂಬುದು ತಪಾಸಣೆ ವೇಳೆ ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿ ಸಹಾಯ್ ಕೂಡ ತಪ್ಪೊಪ್ಪಿಕೊಂಡಿದ್ದಾನೆ. ಆನ್‌ಲೈನ್‌ನಲ್ಲಿ 22,000 ರೂ.ಗೆ ಕ್ಯಾಮೆರಾ ಖರೀದಿಸಿ, ಅದನ್ನು ಬಲ್ಬ್ ಹೋಲ್ಡರ್ ಒಳಗೆ ಇರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಈ ಹಿಂದೆ ಶಾಲೆಯ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿತ್ತು. ಆ ಕ್ಯಾಮೆರಾವನ್ನು ಕೋಆರ್ಡಿನೇಟರ್ ಪಾರುಲ್ ಅವರಿಗೆ ಹಸ್ತಾಂತರಿಸಲಾಯಿತು. ಆ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ತಿಳಿಸಿದರು. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್)