ಮೇವಿನ ಹಣ ವಾಪಸ್ಸು ಕೇಳಿದ್ದಕ್ಕೆ ಮಹಿಳೆಗೆ ಅಡ್ಡರಸ್ತೆಯಲ್ಲೇ ದೊಣ್ಣೆಯಿಂದ ಥಳಿಸಿ ಕ್ರೌರ್ಯ..

indian money
ಸಾಂದರ್ಭಿಕ ಚಿತ್ರ
Published on

ಸತಾರಾ: ದನದ ಮೇವಿಗಾಗಿ ನೀಡಿದ ಹಣವನ್ನು ವಾಪಸ್ ಕೇಳಿದ್ದಕ್ಕೆ ಕೋಪಗೊಂಡ ನಾಲ್ವರು ಮಹಿಳೆಯೊಬ್ಬರನ್ನು ಅಡ್ಡರಸ್ತೆಯಲ್ಲಿ ದೊಣ್ಣೆಯಿಂದ ಥಳಿಸಿರುವ ಘಟನೆ ಮಹಾರಾಷ್ಟ್ರದ ಸತಾರ ಬಳಿ ನಡೆದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರ ಗ್ರಾಮದ ಬಳಿಯೇ ಈ ಹೃದಯ ವಿದ್ರಾವಕ ಘಟನೆಯೊಂದು ಮುನ್ನೆಲೆಗೆ ಬಂದಿದ್ದು, ಈ ವಿಚಾರದಲ್ಲಿ ಮೊದಲಿಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಆದರೆ ವಿಡಿಯೋ ಹೊರಬಿದ್ದ ನಂತರ ಪೊಲೀಸರು ತರಾತುರಿಯಲ್ಲಿ ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆಯ ನಂತರ ಮುಖ್ಯಮಂತ್ರಿಗಳ ತವರು ಪ್ರದೇಶದಲ್ಲಿಯೇ ಮಹಿಳೆಯೊಬ್ಬರ ಮೇಲೆ ಈ ಹೇಯ ಕೃತ್ಯ ನಡೆದಾಗ ರಾಜ್ಯದ ಇತರೆ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆಗಳು ಎದ್ದಿವೆ.

satara woman

ಪವನ್ ಗ್ರಾಮದಲ್ಲಿ ವಾಸಿಸುವ ಮಹಿಳೆಯೊಬ್ಬರು ಜಾನುವಾರುಗಳಿಗೆ ಮೇವು ಖರೀದಿಸಲು ಹಣ ನೀಡಿದ್ದರು. ಮೇವು ಸಿಗದಿದ್ದಾಗ ಮಹಿಳೆ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಕುಪಿತಗೊಂಡ ಗ್ರಾಮದ ನಾಲ್ವರು ಸೇರಿಕೊಂಡು ಮಹಿಳೆಯನ್ನು ಬೆತ್ತದಿಂದ ಅಮಾನುಷವಾಗಿ ಥಳಿಸಿದ್ದಾರೆ. ಇದರಲ್ಲಿ ಸಂತ್ರಸ್ತ ಮಹಿಳೆ ಕಿರುಚಾಡುತ್ತಿರುವುದು ಕಂಡು ಬಂದಿದ್ದು, ಈ ಘಟನೆ ಬಳಿಕ ಕೆಲವರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಪತಿ ಮೈಮೇಲೆ ಕುದಿಯುವ ನೀರು ಸುರಿದ ಪತ್ನಿ..!

ಇನ್ನು ಘಟನೆಗೆ ಸಂಬಂಧಿಸಿದಂತೆ ಮಾಸ್ವಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕ್ರಮ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ದೇವದಾಸ್ ರೋಹಿದಾಸ್ ನರ್ಲೆ ಮತ್ತು ಪಿಂಟು ಅಲಿಯಾಸ್ ಶಾಂತಾರಾಮ್ ರೋಹಿದಾಸ್ ನರ್ಲೆ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net