

ಇಟಾಹ್: ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾಹ್ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಸೆಲ್ಫಿ ವ್ಯಾಮೋಹಕ್ಕೆ ಕ್ಷಣಾರ್ಧದಲ್ಲೇ ಹೋಯ್ತು ಯುವಕನ ಪ್ರಾಣ: ಸ್ನೇಹಿತರ ಮುಂದೆಯೇ ನಡೆದ ಘಟನೆ
ಮೃತರನ್ನು ತಾಯಿ ಅನುರಾಧ(45), ಮಗಳು ಸಂಧ್ಯಾ(17) ಮತ್ತು ಶಿವಾನಿ(15) ಎಂದು ಗುರುತಿಸಲಾಗಿದ್ದು, ಘಟನೆ ವೇಳೆ ಕಿರಿಯ ಮಗಳು ಮುಸ್ಕಾನ್(10) ಎಂಬುವಳನ್ನು ಮೊಬೈಲ್ ನೆಪವೊಡ್ಡಿ ಹೊರಗಡೆ ಕಳುಹಿಸಿದ್ದರು. ಆಕೆ ಮನೆಗೆ ಬಂದ ಕೂಡಲೇ ಮೂವರ ಮೃತದೇಹಗಳನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಹಿರಿಯ ಮಗಳು ಸಂಧ್ಯಾ ಗ್ರಾಮದ ಸುಮಿತ್ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಆದರೆ ಕುಟುಂಬ ಸದಸ್ಯರು ಸಿದ್ಧರಿರಲಿಲ್ಲ. ಈ ನಡುವೆ ಸುಮಿತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸುದ್ದಿಯು ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಸಂಧ್ಯಾಳ ತಂದೆ ನರೇಂದ್ರಗೆ ತಿಳಿದಿದ್ದು, ಆತ ಫೋನ್ನಲ್ಲಿ ಪತ್ನಿ ಮತ್ತು ಪುತ್ರಿಯರನ್ನು ಗದರಿಸಿದ್ದರು. ಇದರಿಂದ ಮನೆಯಲ್ಲಿ ಮನಸ್ತಾಪ ಶುರುವಾಗಿತ್ತು.
ಈ ಹಿನ್ನೆಲೆ ಮನನೊಂದಿದ್ದ ಮೂವರು ಆತ್ಮಹತ್ಯೆ ನಿರ್ಧರಿಸಿದ್ದು, ಕಿರಿಯ ಮಗಳು ಮುಸ್ಕಾನ್ಗೆ ಮೊಬೈಲ್ನಲ್ಲಿ ಚಾರ್ಜ್ ಖಾಲಿಯಾಗಿದೆ. ಪೂರ್ತಿ ಚಾಜ್ ಮಾಡಿಕೊಂಡು ಬಾ ಎಂದು ಹೇಳಿ ಗ್ರಾಮದ ಪರಿಚಯಸ್ಥರ ಮನೆಗೆ ಕಳುಹಿಸಿದ್ದರು. ಅದರಂತೆ ಮುಸ್ಕಾನ್ ಹೊರ ನಡೆದಿದ್ದು, ಆ ಬಳಿಕ ಒಂದೇ ಹಗ್ಗವನ್ನು ಮೂರು ತುಂಡುಗಳನ್ನು ಕತ್ತರಿಸಿ ಮೂವರು ನೇಣು ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: VIDEO| ಬಸ್ಗೆ ಬೆಂಕಿ: ಪ್ರಾಣಾಪಾಯದಿಂದ ಸುಮಾರು 45 ಪ್ರಯಾಣಿಕರು ಪಾರು
ಮೊದಲು ಹಗ್ಗವನ್ನು ತುಂಡರಿಸಿ ಹೆಣ್ಣು ಮಕ್ಕಳಿಗೆ ನೀಡಿ ನಂತರ ತಾಯಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಊಹಿಸಲಾಗುತ್ತಿದೆ. ಸಾವಿನ ಬಗ್ಗೆ ಈಗಾಗಲೇ ನರೇಂದ್ರನಿಗೆ ಮಾಹಿತಿ ನೀಡಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)