ನವಜಾತ ಶಿಶುವಿನ ಪ್ರಾಣ ತೆಗೆದು ಹೂತಿಟ್ಟ ಮಹಿಳೆ: ಮೃತದೇಹವನ್ನು ಮೇಲೆತ್ತಿ ಎಳೆದಾಡಿದ ಬೀದಿ ನಾಯಿಗಳು

kerala woman
Published on

ತಿರುವನಂತಪುರಂ: ನವಜಾತ ಶಿಶುವನ್ನು ಕೊಲೆಗೈದು ಮೃತದೇಹವನ್ನು ಮನೆಯ ಹಿಂದೆ ಹೂತಿಟ್ಟ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಹೀನ ಕೃತ್ಯವನ್ನು ಎಸಗಿದ ಮಹಿಳೆಯನ್ನು ಜೂಲಿ ಎಂದು ಗುರುತಿಸಲಾಗಿದ್ದು, ತಿರುವನಂತಪುರಂದ ಅಂಕುತೆಂಗು ಗ್ರಾಮದ ನಿವಾಸಿಯಾಗಿದ್ದಾಳೆ. ಈಕೆ ಹಲವು ದಿನಗಳ ಹಿಂದೆ ತನ್ನ ಮನೆಯ ಹಿಂಭಾಗದ ಸ್ನಾನಗೃಹದಲ್ಲಿ ಹೆರಿಗೆಯಾದ ತಕ್ಷಣ ಮಗುವಿನ ಬಾಯಿ ಮತ್ತು ಮೂಗನ್ನು ಮುಚ್ಚಿದ್ದಾಳೆ. ಇದರಿಂದಾಗಿ ಮಗು ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದು, ಬಳಿಕ ಮನೆಯ ಸಮೀಪವೇ ಮಗುವಿನ ಶವವನ್ನು ಹೂತು ಹಾಕಿದ್ದಾಳೆ.

ಇದನ್ನೂ ಓದಿ: ಟ್ರ್ಯಾಕ್ಟರ್​​ನಡಿ ಸಿಲುಕಿ ಬಾಲಕ ಮೃತ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಅಪ್ರಾಪ್ತ ವಯಸ್ಸಿನ ಚಾಲಕನ ಹತ್ಯೆ

ಜುಲೈ 18ರಂದು ಆಕೆ ಮಗು ಹೂತು ಹಾಕಿದ ಸ್ಥಳಕ್ಕೆ ಭೇಟಿ ನೀಡಿದಾಗ ಮಗುವಿನ ದೇಹ ಕಾಣೆಯಾಗಿದ್ದು ಕಂಡು ಗಾಬರಿಯಾಗಿದ್ದು, ಏನು ಮಾಡಬೇಕೆಂದು ದಿಕ್ಕು ತೋಚದೆ ಸುಮ್ಮನಾಗಿದ್ದಾಳೆ. ಆದರೆ ಬೀದಿ ನಾಯಿಗಳ ಗುಂಪೊಂದು ಮಗುವಿನ ಮೃತದೇಹವನ್ನು ಎಳೆದೊಯ್ದು ಬೀಚ್‌ನಲ್ಲಿ ತಿನ್ನುವಾಗ, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.

ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವಿನ ಮೃತದೇಹವನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಮೊದಲಿಗೆ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಜೂಲಿಯನ್ನು ಬಂಧಿಸಿದೆ. ಆರಂಭದಲ್ಲಿ ಆಕೆ ಆರೋಪಗಳನ್ನು ನಿರಾಕರಿಸಿದರೂ, ಪೊಲೀಸರು ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಿದ ನಂತರ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ವಿಧವೆಯಾಗಿದ್ದರೂ ಹೆರಿಗೆಯಾಗಿತ್ತು. ಹಾಗಾಗಿ ಅವಮಾನಕ್ಕೆ ಹೆದರಿ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾಳೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net