

ಬಂಟ್ವಾಳ: ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಬಂದ ಸಂದೇಶಕ್ಕೆ ಮಾರುಹೋದ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಮಾರ್ಚ್ 23ರಂದು ಸಂತ್ರಸ್ತೆಯ ವಾಟ್ಸ್‌ಆ್ಯಪ್‌ಗೆ ಎಲೈಸ್ ಎಲ್‌ಆರ್‌ಸಿ ಗ್ರೂಪ್ ಲಿಂಕ್ ಬಂದಿದ್ದು, ಆ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ. ಆ ಬಳಿಕ, ಷೇರು ಮಾರುಕಟ್ಟೆಯಲ್ಲಿ ಡಿಸ್ಕೌಂಟ್ ಬೆಲೆಗೆ ಷೇರುಗಳನ್ನು ಮಾರಾಟ ಮಾಡುವುದಾಗಿ ಸತತ ಮೆಸೇಜ್ ಬರುತ್ತಿದ್ದು, ಇದನ್ನು ನಂಬಿದ ಮಹಿಳೆ ಎಲೈಸ್ ಎಲ್‌ಆರ್‌ಸಿ ಎಂಬ ಕಂಪೆನಿಯ ಖಾತೆಯಲ್ಲಿ ಹೂಡಿಕೆ ಮಾಡುವುದಕ್ಕಾಗಿ ತನ್ನ ಬ್ಯಾಂಕ್ ಖಾತೆಗಳಿಂದ, ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17.57 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ.
ನಂತರ ಆರೋಪಿಗಳು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು, ಮಹಿಳೆ ತಾನು ವರ್ಗಾಯಿಸಿದ ಹಣ ತನ್ನ ಖಾತೆಗೆ ಮರು ಜಮೆ ಆಗದಿರುವುದರಿಂದ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.