ಧನಂಜಯ ಗುರುಪುರ
ಆಗಿಂದ್ದಾಗ್ಗೆ ಸುರಿಯುವ ಜಡಿ ಮಳೆಗೆ ನೆನೆದು ಮೃದುವಾಗಿದೆ ಮುರುಕಲು ಮನೆಯ ಮಣ್ಣಿನ ಗೋಡೆ… ಸಂಪೂರ್ಣ ಕುಸಿದು ನೆಲಕ್ಕಚ್ಚಿದ ಮೇಲ್ಛಾವಣಿ… ಚಿಂದಿಯಾಗಿವೆ ತಾತ್ಕಾಲಿಕ ರಕ್ಷಣೆಗಾಗಿ ಸ್ಥಳೀಯರು ಹಿಂದೆ ಹಾಸಿದ್ದ ಟರ್ಪಾಲುಗಳು… ಮಳೆ ನೀರಿಗೆ ತೊಯ್ದಿದೆ ಮನೆಯ ನೆಲ… ಸ್ಥಳೀಯ ಪರಿಸರದಲ್ಲಿ ಅತ್ತಿಂದಿತ್ತ ಸುತ್ತಿ ಅನ್ನ, ನೀರು ಪಡೆಯಲು ಅನಾಥ ವೃದ್ಧೆಗೆ ಆಸರೆಯಾಗಿದ್ದ ಕೈ-ಕಾಲುಗಳೂ ಮಳೆ ಹಾಗೂ ಶೀತ ಹವೆಯ ತೀವ್ರತೆಗೆ ಮರಗಟ್ಟಿವೆ… ಅನ್ನ – ನೀರು ಹರಸಿ ನಡೆದಾಡಲೂ ಅಸಾಧ್ಯವಾದ ದಯನೀಯ ಪರಿಸ್ಥಿತಿ… ಗಾಯದ ಮೇಲೆ ಬರೆ ಎಳೆದಂತಿದೆ ಈಕೆಯ ಬದುಕಿನ ಸಂಧ್ಯಾ ಕಾಲ…
ಹೌದು…. ಇದು ಬಜ್ಪೆ ಪಟ್ಟಣ ಪಂಚಾಯಿತಿ ಕಚೇರಿಗೆ ಅನತಿ ದೂರದಲ್ಲಿರುವ ಗುರುನಾರಾಯಣ ಮಂದಿರದ ಹಿಂಬದಿಯ ಮುರುಕಲು ಮನೆಯೊಂದರಲ್ಲಿ ಅನಾರೋಗ್ಯ ಪೀಡಿತರಾಗಿ ವಾಸಿಸುತ್ತಿರುವ ಅನಾಥ ವೃದ್ಧೆಯ ಮೂಕರೋದನ. ಸಂಪೂರ್ಣ ಮುರಿದು ಬಿದ್ದಿರುವ ಮುರುಕಲು ಮನೆಯಲ್ಲಿ ಅಂದಾಜು 85 ವರ್ಷ ದಾಟಿರುವ ವೃದ್ಧೆ ಗುಲಾಬಿ ಪೂಜಾರಿ ಅವರ ಇಂದಿನ ಪರಿಸ್ಥಿತಿ.
ಕಾಂಪೌಂಡಿನೊಳಗೆ ಇವರ ಸಂಬಂಧಿಕರ ಮನೆ ಇದ್ದು, ಕಾಂಪೌಂಡ್ ಜಾಗ ಮಾರಾಟ ಮಾಡಿದ ಬಳಿಕ ಅವರು ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದರು. ಹಾಗಾಗಿ ಈಗ ಮಾರಾಟ ಮಾಡಲಾದ ಜಾಗದಲ್ಲಿ ಇರುವ ತನ್ನ ಮನೆಯಲ್ಲಿ ವೃದ್ಧೆ ಗುಲಾಬಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಗಾಳಿ ಮಳೆಗೆ ಗುಲಾಬಿ ಅವರ ಮನೆ ಸಂಪೂರ್ಣ ಕುಸಿದಿದೆ.
ಕಾಲಿನ ಊನತೆ ಇದ್ದರೂ, ಕೆಲಸ ಮಾಡಲು ಸಾಧ್ಯವಿದ್ದಾಗ ಬಜ್ಪೆಗೆ ಹತ್ತಿರದ ಪಡುಪೆರಾರದಲ್ಲಿರುವ ಗೇರುಬೀಜ ಕಂಪೆನಿಗೆ ನಡೆದುಕೊಂಡೇ ಕೆಲಸಕ್ಕೆ ಹೋಗುತ್ತಿದ್ದ ಈಕೆ ಸ್ವಾವಲಂಬಿಯಾಗಿ ಬದುಕುತ್ತಿದ್ದರು. ಇಳಿವಯಸ್ಸಿನ ಕಾರಣ ಇತ್ತೀಚಿನ ದಿನಗಳಲ್ಲಿ ದುಡಿಯಲು ಅಸಾಧ್ಯವಾಗಿದ್ದು, ನಿನ್ನೆ-ಮೊನ್ನೆಯ ವರೆಗೂ ಸ್ಥಳೀಯವಾಗಿ ತಿರುಗಾಡುತ್ತಿದ್ದ ಈಕೆಗೆ ಸ್ಥಳೀಯರು ಮಾನವೀಯತೆಯ ನೆಲೆಯಲ್ಲಿ ಊಟ, ನೀರು ಕೊಡುತ್ತಿದ್ದರು. ಆದರೆ ಕಳೆದ 2 ದಿನಗಳಿಂದ ಇವರು ಕಾಣದಾದಾಗ ಸ್ಥಳೀಯರೊಬ್ಬರು ಮನೆಗೆ ತೆರಳಿ ವಸ್ತುಸ್ಥಿತಿ ನೋಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟರು. ಜೊತೆಗೆ ಪ್ರಾಥಮಿಕ ಹಂತದ ನೆರವಾಗಿ ಮನೆಯ ಮೇಲ್ಛಾವಣಿಗೆ ಅವರೇ ಟಾರ್ಪಾಲ್ ಹಾಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಶಾಸಕ ಕೋಟ್ಯಾನ್
ಸಾಮಾಜಿಕ ಜಾಲತಾಣದಲ್ಲಿ ಸಚಿತ್ರ ಮಾಹಿತಿ ವೈರಲ್ ಆಗುತ್ತಲೇ, ಮೂಲ್ಕಿ – ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಧಾವಿಸಿ ಬಂದು ಮಾನವೀಯ ನೆಲೆಯಲ್ಲಿ ಆಕೆಗೆ ಸೂಕ್ತ ಆರೋಗ್ಯ ಸೇವೆ ಹಾಗೂ ವಾಸ್ತವ್ಯ ವ್ಯವಸ್ಥೆಗೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಬಜ್ಪೆ ಪಟ್ಟಣ ಪಂಚಾಯತ್ ಅಧಿಕಾರಿಗಳು, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಕರೆ ಮಾಡಿ, ವೃದ್ಧೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸ್ನಾನ ಮಾಡಿಸಿ ಆಸ್ಪತ್ರೆಗೆ ದಾಖಲು
ನಡೆದಾಡಲಾಗದೆ ಮಲಗಿದಲ್ಲೇ ಅನ್ನ-ಆಹಾರ, ನೀರು ಸೇವಿಸುತ್ತಿದ್ದ ಗುಲಾಬಿ ಅವರಿಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸ್ನಾನ ಮಾಡಿಸಿ, ಶುಚಿ ಬಟ್ಟೆಬರೆ ಧರಿಸಿ, ಸರ್ಕಾರಿ ಆಂಬುಲೆನ್ಸ್‌ನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಗುಣಮುಖರಾದ ಬಳಿಕ ಅವರನ್ನು ಯಾವುದಾದರೂ ಆಶ್ರಮಕ್ಕೆ ಸೇರಿಸುವ ವ್ಯವಸ್ಥೆ ಮಾಡಲಾಗುವುದು. ಅಗತ್ಯವೆಂದಾದರೆ ಮನೆ ದುರಸ್ತಿ ಮಾಡಿ ಕೊಡಲಾಗುವುದು ಎಂದು ಶಾಸಕ ಕೋಟ್ಯಾನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬೇರೆಲ್ಲೂ ಇರಲು ಒಪ್ಪುತ್ತಿರಲಿಲ್ಲ
ಹಿಂದೊಮ್ಮೆ ಅನಾರೋಗ್ಯದ ಸಂದರ್ಭದಲ್ಲಿ ಬಜ್ಪೆಯ ಉದ್ಯಮಿ ಯಶೋಧರ ಎಂಬವರು ಬಡಗಬೆಳ್ಳೂರಿನ ಅರಳದಲ್ಲಿರುವ ಆಶ್ರಮಕ್ಕೆ ಸೇರಿಸಿದ್ದರು. ಹೀಗೆ ಹಲವು ಬಾರಿ ಸ್ಥಳೀಯರು ವೃದ್ಧೆಯ ನೆರವಿಗೆ ಬಂದಿದ್ದರೂ, ಏಕಾಂಗಿತನ ಕಾಡಲಾರಂಭಿಸಿದರೂ ಈಕೆ ತನ್ನ ಮನೆ ಬಿಟ್ಟು ಬೇರೆಲ್ಲೂ ಇರಲು ಒಪ್ಪುತ್ತಿರಲಿಲ್ಲ ಎನ್ನುತ್ತಾರೆ ಪ್ರಸಕ್ತ ಪ.ಪಂ.ಆಗಿ ಮೇಲ್ದರ್ಜೆಗೇರಿರುವ ಬಜ್ಪೆ ಗ್ರಾ.ಪಂ. ಮಾಜಿ ಸದಸ್ಯ ಲೋಕೇಶ್.
ಗುಣಮುಖರಾದ ಬಳಿಕ ವಾಸ್ತವ್ಯಕ್ಕೆ ಏರ್ಪಾಡು
ಸಾಮಾಜಿಕ ಜಾಲತಾಣದಲ್ಲಿ ಗುಲಾಬಿ ಅವರ ಸ್ಥಿತಿ ಬಗ್ಗೆ ತಿಳಿದು ತಕ್ಷಣ ಮನೆಗೆ ಧಾವಿಸಿದೆ. ಅವರಿಗೆ ಈ ಹಿಂದೆ ನಾವೆಲ್ಲ ಸಹಾಯ ಮಾಡಿದ್ದೆವು. ತುಸು ಒರಟು ಸ್ವಭಾವದ ಮಹಿಳೆಯಾದ್ದರಿಂದ ಹೆಚ್ಚಿನ ನೆರವು ಕಷ್ಟವಾಗಿತ್ತು. ಶಾಸಕರು ಸ್ಥಳಕ್ಕೆ ಬಂದಿದ್ದು, ಮಹಿಳೆಯ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಗುಣಮುಖರಾದ ಬಳಿಕ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗುವುದು ಎಂದು ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್ ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೃದ್ಧೆಯ ದಯನೀಯ ಪರಿಸ್ಥಿತಿಯ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಪಂಚಾಯಿತಿಯ ಮಾಜಿ ಸದಸ್ಯ ಲೋಕೇಶ್ ಪೂಜಾರಿ ಬಜ್ಪೆ, ಬಜ್ಪೆ ಪಟ್ಟಣ ಪಂಚಾಯಿತಿ ಇಂಜಿನಿಯರ್ ನಳಿನ್ ಕುಮಾರ್, ಸಿಬ್ಬಂದಿ ಬಾಲಕೃಷ್ಣ ಕತ್ತಲ್ಸಾರ್, ಸಿರಾಜ್ ಬಜ್ಪೆ, ಫಯಾಝ್, ಕಿರಣ್ ಅತ್ತೊಲಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಜ್ಪೆ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಆಶಾ ಕಾರ್ಯಕರ್ತೆ ಅಕ್ಷಿತಾ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ, ಬಜ್ಪೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ಕುಮಾರ್ ಕೆಂಜಾರು, ಬಜ್ಪೆ ಬಿಲ್ಲವ ಸಂಘದ ಅಧ್ಯಕ್ಷ ಶಿವರಾಮ ಪೂಜಾರಿ ದೊಡ್ಡಿಕಟ್ಟ, ಬಿರುವೆರ್ ಕುಡ್ಲ ಬಜ್ಪೆ ಘಟಕದ ಸದಸ್ಯರಾದ ಗಣೇಶ್, ದಿನೇಶ್ ಬಂಗೇರ, ಯುವವಾಹಿನಿ ಬಜ್ಪೆ ಘಟಕದ ಅಧ್ಯಕ್ಷ ನಿರಂಜನ ಕರ್ಕೇರ, ಬಜ್ಪೆ ಪೊಲೀಸರು, ವಿಹಿಂಪ ಪ್ರಮುಖರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ.