ಪುರುಷೋತ್ತಮ ಪೆರ್ಲ ಕಾಸರಗೋಡು
ನಗರದ ಹಲವೆಡೆ ರಸ್ತೆಗಳಲ್ಲಿ ಭಾರಿ ಹೊಂಡಗಳು ಇದ್ದು, ಜೋರು ಮಳೆಯಿಂದ ಇವುಗಳು ತುಂಬಿಕೊಂಡು ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಕಂಟಕವಾಗಿದೆ. ಹೊಂಡಗಳಿಂದ ದಿನನಿತ್ಯವೂ ಅಪಘಾತ, ಸಾವು ನೋವುಗಳ ವರದಿಯಾಗುತ್ತಿದ್ದರೂ ಅಧಿಕಾರಿಗಳು ನಿಷ್ಕ್ರೀಯರಾಗಿರುವುದು ವಿಪರ್ಯಾಸ.
ಕಾಸರಗೋಡು ಎಂ.ಜಿ ರಸ್ತೆಯ ಆನೆಬಾಗಿಲು ರಸ್ತೆ, ಮುಖ್ಯ ಅಂಚೆಕಚೇರಿ, ಬ್ಯಾಂಕ್ ರಸ್ತೆಯ ಕೆಲವೆಡೆ ರಸ್ತೆ ಹೊಂಡಬಿದ್ದು, ಅಪಘಾತ ಭಯ ಎದುರಾಗಿದೆ. ವಾಹನ ಹಾಗೂ ಜನದಟ್ಟಣೆಯಿಂದ ಕೂಡಿದ ನಗರದ ಮುಖ್ಯ ಅಂಚೆಕಚೇರಿ ಪ್ರದೇಶದ ರಸ್ತೆಯಲ್ಲಿ ಉಂಟಾಗಿರುವ ಹೊಂಡದಿಂದ ಜನತೆಗೆ ಭಾರಿ ಸಂಕಷ್ಟ ಎದುರಾಗಿದೆ.
ಮಳೆಗಾಲ ಆರಂಭಕ್ಕೂ ಮುನ್ನ ಈ ರಸ್ತೆಗಳು, ಹೊಂಡಗಳನ್ನು ದುರಸ್ತಿಗೊಳಿದಿರುವುದರಿಂದ ಸಮಸ್ಯೆ ಜಟಿಲವಾಗಿದೆ. ಸಮಸ್ಯೆ ಕುರಿತು ಅಧಿಕಾರಿಗಳಲ್ಲಿ ಪ್ರಸ್ತಾಪಿಸಿದರೆ ನಿರ್ಲಕ್ಷತೆಯ ಉತ್ತರ ಸಿಗುತ್ತದೆ.
ಹೆದ್ದಾರಿಯಲ್ಲೂ ಸಂಕಷ್ಟ
ಷಟ್ಪಥ ಅಭಿವೃದ್ಧಿ ಯೋಜನೆಯನ್ವಯ ನಡೆಯುತ್ತಿರುವ ಕಾಮಗಾರಿಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವೆಡೆ ವಾಹನ ಸಂಚಾರ ತ್ರಾಸದಾಯಕವಾಗಿದ್ದು, ಒಳ ರಸ್ತೆಗಳಲ್ಲೂ ಸಮಸ್ಯೆ ಕಾಡುತ್ತಿದೆ. ಭಾರಿ ಮಳೆಯ ಕಾರಣ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿವೆ.
ಮೊಗ್ರಾಲ್ ಪೇಟೆಯಲ್ಲಿ ಅಂಡರ್ ಪಾಸ್ ಬಳಿ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ವ್ಯಾಪಕ ಹೊಂಡಗಳಿವೆ. ಕಾಮಗಾರಿ ನಡೆಯುತ್ತಿರುವ ಸರ್ವೀಸ್ ರಸ್ತೆಯ ಚೆರ್ಕಳ, ವಿದ್ಯಾನಗರ, ಮೊಗ್ರಾಲ್, ಮೊಗ್ರಾಲ್ ಪುತ್ತೂರು ಭಾಗದಲ್ಲಿ ಬೃಹತ್ ಹೊಂಡಗಳು ಉಂಟಾಗಿ ರಸ್ತೆ ಜಲಾವೃತವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಲ್ಲೇ ಕೊಳಚೆ ನೀರು ಸಂಗ್ರಹವಾಗುತ್ತದೆ.
ಪ್ರಸಕ್ತ ಹೆದ್ದಾರಿ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಸರ್ವೀಸ್ ರಸ್ತೆ ಸಂಪೂರ್ಣ ಕುಸಿಯಲು ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಸಮರ್ಪಕ ಯೋಜನೆ ರೂಪಿಸುವಿಕೆಯೇ ರಸ್ತೆ ಕುಸಿತಕ್ಕೆ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.
ಡಿಸಿ ಎಚ್ಚರಿಕೆಯೂ ನಿರ್ಲಕ್ಷೃ
ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಗೆ ರಸ್ತೆಯ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲ ಆರಂಭಕ್ಕೂ ಮುನ್ನವೇ ನೀರು ಹರಿಯಲು, ರಸ್ತೆಗಳನ್ನು ದುರಸ್ತಿಗೊಳಿಸಲು ಸ್ವತಃ ಜಿಲ್ಲಾಧಿಕಾರಿಯೇ ಸೂಚನೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಯ ಎಚ್ಚರಿಕೆಗೂ ಕ್ಯಾರೆ ಎನ್ನದೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ.
ನಗರದ ವಿವಿಧೆಡೆ ರಸ್ತೆಗಳ ಹೊಂಡ ದುರಸ್ತಿಗೆ ಸಂಬಂಧಿಸಿ ಯೋಜನೆ ತಯಾರಿಸಿ, ಸಂಬಂಧಪಟ್ಟವರಿಗೆ ಕಳುಹಿಸಿಕೊಡಲಾಗಿದ್ದರೂ, ಯಾವುದೇ ಸೂಚನೆ ಲಭಿಸಿಲ್ಲ. ಹೊಂಡಗಳ ಅಪಾಯ ಅರಿತು ತುರ್ತು ದುರಸ್ತಿಗೆ ಇಲಾಖೆ ಮುಂದಾಗಿದ್ದು, ಒಂದೆರಡು ದಿನಗಳಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿದೆ.
ರಮ್ಯಾ ಕೆ. ಸಹಾಯಕ ಅಭಿಯಂತೆ, ಲೋಕೋಪಯೋಗಿ ಇಲಾಖೆ,