

ಮೂಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ.
ಕುಬೆವೂರು ಶಿಮಂತೂರು ರಸ್ತೆ ಬದಿ ಭಾರಿ ಗಾತ್ರದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಎರಡು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಸಮೀಪದಲ್ಲಿದ್ದ ಟ್ರಾನ್ಸ್‌ಫಾರ್ಮರ್ ಅಳವಡಿಸಿದ ವಿದ್ಯುತ್ ಕಂಬಕ್ಕೂ ಹಾನಿಯಾಗಿ ಸಂಚಾರ ವ್ಯತಯ ಉಂಟಾಗಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಮರ ಹಾಗೂ ಮುರಿದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ.
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಚಿತ್ರಾಪು ಎಣ್ಣೆ ಮಿಲ್ ಬಳಿ ಗಾಳಿ ಮಳೆಗೆ ವಿದ್ಯುತ್ ಕಂಬ ವಾಲಿ ನಿಂತಿದ್ದು, ಬಳಿಕ ದುರಸ್ತಿ ಪಡಿಸಲಾಗಿದೆ. ಮೂಲ್ಕಿ ವ್ಯಾಪ್ತಿಯ ನದಿ ಪಾತ್ರಗಳಲ್ಲಿ ಮಳೆಗೆ ನೀರು ಉಕ್ಕೇರುತ್ತಿದ್ದು, ಎಚ್ಚರಿಕೆಯಿಂದ ಇರಲು ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪಡುಪಣಂಬೂರು- ಚಿತ್ರಾಪು ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.