More

  ಉಳ್ಳಾಲದಲ್ಲಿ ಸಮುದ್ರ ಪಾಲಾದ ಆಂಧ್ರದ ಮಹಿಳೆ

  ಉಳ್ಳಾಲ: ಧಾರ್ಮಿಕ ಕೇಂದ್ರಗಳ ದರ್ಶನದ ಬಳಿಕ ಸೋಮವಾರ ಉಳ್ಳಾಲ ಬೀಚ್‌ಗೆ ಬಂದ ತಂಡದಲ್ಲಿದ್ದ ಓರ್ವ ಮಹಿಳೆ ಸಮುದ್ರ ಪಾಲಾಗಿದ್ದಾರೆ.
  ಆಂಧ್ರಪ್ರದೇಶ ಕೊಂಡಾಪುರ ಸಿರಿಲಿಂಗಪಲ್ಲಿ ಗ್ರಾಮದ ನಿವಾಸಿ ಪಿ.ಎಲ್.ಪ್ರಸನ್ನ ಎಂಬವರ ಪತ್ನಿ ಪರಿಮಿ ರತ್ನ ಕುಮಾರಿ(57) ಸಮುದ್ರ ಪಾಲಾದ ಮಹಿಳೆ.

  ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಹೈದರಾಬಾದಿನಿಂದ ಸ್ನೇಹಿತರಾದ ಪರಿಮಿ ರತ್ನ ಕುಮಾರಿ, ವೆನ್ನ ವಿಜಯಲಕ್ಷ್ಮೀ, ಸ್ವಾತಿ, ಸುನಂದಾ, ಅರುಣಾ ಮತ್ತು ಸುಮಾ ಹೆಸರಿನ 6 ಮಂದಿ ಇದ್ದ ಮಹಿಳೆಯರ ತಂಡ ವಿಮಾನದ ಮೂಲಕ ಜೂ.6ಕ್ಕೆ ಮೈಸೂರಿಗೆ ಬಂದಿದ್ದರು. ಒಂದು ದಿನ ಅಲ್ಲಿ ತಿರುಗಾಡಿದ್ದ ತಂಡ, ಜೂ.7ರಂದು ಕಾರಿನ ಮೂಲಕ ಕೊಡಗಿಗೆ ತಲುಪಿದ್ದು, ಜೂ.9ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆದಿದ್ದರು. ಸೋಮವಾರ ಬೆಳಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಮಧ್ಯಾಹ್ನದ ಬಳಿಕ ಉಳ್ಳಾಲಕ್ಕೆ ಬಂದು ಸೋಮೇಶ್ವರ ಸೋಮನಾಥ ಕ್ಷೇತ್ರದಲ್ಲಿ ದರ್ಶನ ಪಡೆದಿದ್ದಾರೆ. ಬಳಿಕ ವಿಹಾರಕ್ಕೆಂದು ಉಳ್ಳಾಲ ಸಮುದ್ರ ತೀರಕ್ಕೆ ಬಂದಿದ್ದರು.

  ಸಮುದ್ರ ಕಿನಾರೆಯಲ್ಲಿ ನೀರಿನಲ್ಲಿ ಆಟವಾಡುತ್ತಾ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದೆ. ನಿಯಂತ್ರಣ ಕಳೆದುಕೊಂಡ ಆರು ಮಹಿಳೆಯರೂ ಬಿದ್ದಿದ್ದು ಸೆರೆ ಎಳೆದೊಯ್ದಿದೆ. ತಕ್ಷಣವೇ ಸ್ಥಳೀಯರು ಮಹಿಳೆಯರನ್ನು ಸಮುದ್ರದಿಂದ ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪರಿಮಿ ರತ್ನ ಕುಮಾರಿ ಪ್ರಥಮ ಚಿಕಿತ್ಸೆಗೆ ಸ್ಪಂದಿಸದ ಕಾರಣ ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts