

ಹಳೆಯಂಗಡಿ: ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಪಾವಂಜೆ ಸೇತುವೆ ಬಳಿಯಿಂದ ಆರಂಭವಾಗುವ ಪಾವಂಜೆ-ಅರಂದು ಗ್ರಾಮದ ಮುಖ್ಯ ಸಂಪರ್ಕ ಕಾಂಕ್ರೀಟ್ ರಸ್ತೆಯ ಬದಿ ಕುಸಿತವಾಗಿ ನೀರುಪಾಲಾಗುವ ಭೀತಿ ಎದುರಾಗಿದೆ.
ಇದು 60ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಪ್ರದೇಶದ ಸಂಪರ್ಕ ರಸ್ತೆಯಾಗಿದ್ದು, ನಂದಿನಿ ನದಿಯ ತಟದಲ್ಲಿ ಹಾದು ಹೋಗುತ್ತಿದೆ. ಭಾರಿ ವಾಹನಗಳು ಸತತವಾಗಿ ಚಲಿಸುತ್ತಿರುವುದು ಮತ್ತು ನದಿ ತಡೆಗೋಡೆ ಮಣ್ಣು ಕುಸಿತದ ಕಾರಣ ರಸ್ತೆ ಬಿರುಕು ಬಿಟ್ಟು ಕುಸಿದಿದೆ. ಕುಸಿತ ಕಂಡ ಕಾರಣ ರಾತ್ರಿ ಹೊತ್ತು ದ್ವಿಚಕ್ರ ಹಾಗೂ ರಿಕ್ಷಾ ಸಹಿತ ಸಣ್ಣ ವಾಹನಗಳು ಈ ಪ್ರದೇಶದಿಂದ ಹೋಗುವಾಗ ನಿಯಂತ್ರಣ ಕಳೆದು ನದಿ ಪಾಲಾಗುವ ಭೀತಿ ಇದೆ. ಮಳೆ ನೀರು ಹರಿದು ಹೋಗಲು ನಿರ್ಮಿಸಲಾದ ಸಣ್ಣ ಮೋರಿಯ ಸ್ಥಿತಿಯೂ ಉತ್ತಮವಾಗಿಲ್ಲ.
ಇದು ಈ ಪ್ರದೇಶದ ಮುಖ್ಯ ರಸ್ತೆ. ರಸ್ತೆ ಕಡಿತಗೊಂಡರೆ ಸುತ್ತು ಬಳಸಿ ಅಥವಾ ನಡೆದು ಹೋಗಬೇಕಾದ ಸ್ಥಿತಿ ಇದೆ. ಈ ಬಗ್ಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಿವಾಸಿ ದೀಪಕ್.