

ಮುಂಬೈ : ದೇಶದಲ್ಲಿ ಅತಿಹೆಚ್ಚು ಕರೊನಾ ಪ್ರಕರಣಗಳನ್ನು ವರದಿ ಮಾಡುತ್ತಿರುವ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ 10 ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಬಿಸಿಸಿಐ ಆಯೋಜಿಸಿದೆ. ಆದರೆ ಒಬ್ಬ ಆಟಗಾರ, 7 ಬೋರ್ಡ್ ಸಿಬ್ಬಂದಿ ಮತ್ತು ವಾಂಖೆಡೆ ಸ್ಟೇಡಿಯಂನ 10 ಗ್ರೌಂಡ್ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದೇ ಎಂಬ ಪ್ರಶ್ನೆಗಳು ಕ್ರೀಡಾ ವಲಯದಲ್ಲಿ ಮೂಡಿವೆ.
ಐಪಿಎಲ್ ಪಂದ್ಯಾವಳಿಯಲ್ಲಿ ಎರಡನೇ ಪಂದ್ಯವಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ, ಏಪ್ರಿಲ್ 10 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಏರ್ಪಟ್ಟಿದೆ. ಆದರೆ, ಕರೊನಾ ಆತಂಕಕಾರಿ ಸನ್ನಿವೇಶ ಸೃಷ್ಟಿಸಿದ್ದು, ಮುಂಬೈನಲ್ಲಿ ನಿನ್ನೆ ಒಂದೇ ದಿನದಲ್ಲಿ 9,000 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್ ಅಕ್ಸರ್ ಪಟೇಲ್ಗೆ ಕರೊನಾ ಪಾಸಿಟೀವ್ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ನ ಸಿಬ್ಬಂದಿಯೊಬ್ಬರಿಗೆ ಪಾಸಿಟೀವ್ ಬಂದಿದೆ ಎನ್ನಲಾಗಿದೆ.
ಆದರೆ, ಈ ಅಂತಿಮ ಕ್ಷಣಗಳಲ್ಲಿ ಪಂದ್ಯವನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. "ಈಗ ಪಂದ್ಯವನ್ನು ಬೇರೆ ಕಡೆ ನಡೆಸಬೇಕೆಂದರೆ, ಮತ್ತೆ ಅಲ್ಲಿ ಬಯೋಬಬಲ್ ರಚಿಸಬೇಕಾಗುತ್ತದೆ. ತಂಡಗಳು ಕೂಡ ಒಂದು ನಗರದಿಂದ ಇನ್ನೊಂದಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಇದಕ್ಕಾಗಿ ನಮ್ಮ ಬಳಿ ಸಮಯವಿಲ್ಲ ಮತ್ತು ಹೆಲ್ತ್ ರಿಸ್ಕ್ ಕೂಡ. ಆದ್ದರಿಂದ ಪಂದ್ಯಗಳನ್ನು ಮುಂಬೈನಲ್ಲೇ ಆಡಲಾಗುವುದು. ಎಲ್ಲರ ಸುರಕ್ಷೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ತನ್ನ ಕಚೇರಿಯನ್ನು ತಾತ್ಕಾಲಿಕವಾಗಿ ಮುಂಬೈನ ಒಂದು ಹೋಟೆಲ್ಗೆ ಶಿಫ್ಟ್ ಮಾಡಿದ್ದು, ಬಯೋಬಬಲ್ ಇಂಟಿಗ್ರಿಟಿ ಮ್ಯಾನೇಜರ್ಗಳನ್ನು ನೇಮಕ ಮಾಡಿದೆ. ಏಪ್ರಿಲ್ 10 ರ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಗ್ರೌಂಡ್ ಸ್ಟಾಫ್ಅನ್ನು ಕರೆಸಿಕೊಳ್ಳಲಾಗುವುದು ಎನ್ನಲಾಗಿದೆ. ಐಪಿಎಲ್ನ ಮೊದಲ ಪ್ರಾಕ್ಟೀಸ್ ಸೆಷನ್ ವಾಂಖೇಡೆ ಸ್ಟೇಡಿಯಂನಲ್ಲಿ ಏಪ್ರಿಲ್ 7 ಕ್ಕೆ ನಡೆಯಲಿದೆ. (ಏಜೆನ್ಸೀಸ್)