

ಚೆನ್ನೈ: ನಟ ವಿಜಯ್ ಅವರು ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮೊದಲ ವಾರ್ಷಿಕೋತ್ಸವವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಆಚರಿಸಲಾಗಿದೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಈಗಾಗಲೇ ಟಿವಿಕೆ ಪಕ್ಷವು ತಯಾರಿ ನಡೆಸುತ್ತಿದ್ದು, ಇದರ ನಡುವೆಯೇ ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ್ ಕಿಶೋರ್ ಕೂಡ ಕಾಣಿಸಿಕೊಂಡಿದ್ದು, ಹೊಸ ಸಂಚಲನವನ್ನೇ ಹುಟ್ಟುಹಾಕಿದೆ.
ಬಿಹಾರ ಸೇರಿದಂತೆ ಅನೇಕ ರಾಜ್ಯಗಳ ಚುನಾವಣೆ ಫಲಿತಾಂಶ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಶಾಂತ್ ಕಿಶೋರ್ ಅವರು ತಮಿಳು ನಟ ವಿಜಯ್ ಅವರ ಪಕ್ಷದೊಂದಿಗೆ ಕೈ ಜೋಡಿಸುವುದಾಗಿ ಘೋಷಿಸಿದ್ದು, 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ (TVK) ಗೆಲುವಿಗಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.
ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಪ್ರಶಾಂತ್, ತಮಿಳುನಾಡಿನಲ್ಲಿ ಬಿಹಾರಿ ಒಬ್ಬರು ನನಗಿಂತ ಹೆಚ್ಚು ಜನಪ್ರಿಯವಾಗಿದ್ಧಾರೆ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ ಎಂದರೆ ತಪ್ಪಾಗಲಾರದು. 2026ರ ಚುನಾವಣೆಯಲ್ಲಿ ನಾನು ಟಿವಿಕೆ ಪಕ್ಷವನ್ನು ಗೆಲ್ಲಿಸುವ ಮೂಲಕ ಜನಪ್ರಿಯತೆ ವಿಚಾರದಲ್ಲಿ ಧೋನಿಯನ್ನು ಹಿಂದಿಕ್ಕುತ್ತೇನೆ.
ಪ್ರತಿಬಾರಿ ಐಪಿಎಲ್ನಲ್ಲಿ ಸಿಎಸ್ಕೆ ಗೆಲ್ಲಿಸುವ ಧೋನಿಯನ್ನು ನೀವು ಅಷ್ಟು ಜನಪ್ರಿಯಗೊಳಿಸಿದ್ದೀರ. ಅದೇ ರೀತಿ 2026ರಲ್ಲಿ ನಾನು ಟಿವಿಕೆಯನ್ನು ಗೆಲ್ಲಿಸುವ ಮೂಲಕ ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ಬಿಹಾರಿಯಾಗಬೇಕು ಎಂದುಕೊಂಡಿದ್ದೇನೆ. ವಿಜಯ್ ಅವರು ನನಗೆ ರಾಜಕೀಯ ನಾಯಕನಂತೆ ಕಾಣಿಸುತ್ತಿಲ್ಲ. ಅವರು ತಮಿಳುನಾಡಿಗೆ ಹೊಸ ಆಶಾಕಿರಣದಂತೆ ಭಾಸವಾಗುತ್ತಿದ್ದಾರೆ. ಅದಕ್ಕಾಗಿಯೇ ಇಂದು ನಾನು ಇಲ್ಲಿಗೆ ಬಂದಿದ್ಧೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ಧಾರೆ.